ಬಂಗಾಲ
	ಭಾರತ ಉಪಖಂಡದ ಈಶಾನ್ಯ ಭಾಗದಲ್ಲಿರುವ ಐತಿಹಾಸಿಕ ಪ್ರದೇಶ. ಇದು ಬಂಗಾಲಿ ಭಾಷೆ ಆಡುವವರು ವಾಸಿಸುವ ಪ್ರದೇಶಕ್ಕೆ ಸ್ಥೂಲವಾಗಿ ಸೀಮಿತವಾಗಿದೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಒಂದು ಪ್ರಾಂತ್ಯವಾಗಿದ್ದ ಈ ಪ್ರದೇಶ ಈಗ ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ಹಂಚಿಹೋಗಿದೆ. ಭಾರತದಲ್ಲಿರುವ ಭಾಗ ಪಶ್ಚಿಮ ಬಂಗಾಲ ರಾಜ್ಯವಾಗಿದೆ.

(ನೋಡಿ- ಪಶ್ಚಿಮ-ಬಂಗಾಲ) 
(ನೋಡಿ- ಬಾಂಗ್ಲಾದೇಶ)

	ಪ್ರಾಗಿತಿಹಾಸ: ಬಂಗಾಲದ ಪ್ರಾಗಿತಿಹಾಸ ಕಾಲದ ಶಿಲಾಯುಗ ಸಂಸ್ಕøತಿಗಳನ್ನು ತಿಳಿಯಲು ಅಲ್ಲಿಯ ಪ್ರಾದೇಶಿಕ ವೈವಿಧ್ಯವನ್ನು ತಿಳಿದುಕೊಳ್ಳಬೇಕಾಗುತ್ತದೆ. ಭೌಗೋಳಿಕವಾಗಿ ಗಂಗಾ ನದಿಯ ಕೆಳಗಣ ಬಯಲು, ಎತ್ತರವಾದ ಪ್ರಸ್ಥಭೂಮಿ ಅಥವಾ ಪ್ರಾಚೀನ ಮೆಕ್ಕಲು ಭೂಮಿ ಮತ್ತು ಬೆಟ್ಟಗಾಡು ಪ್ರದೇಶಗಳೆಂದು ಇದನ್ನು ಪ್ರಾಕೃತಿಕವಾಗಿ ವಿಂಗಡಿಸಬಹುದು. ಇವುಗಳ ಪೈಕಿ ಗಂಗಾ ನದಿಯ ಬಯಲು ಇತ್ತೀಚೆಗೆ ನಿರ್ಮಾಣವಾದ್ದಾಗಿರುವುದರಿಂದ ಈ ಪ್ರದೇಶದಲ್ಲಿ ಆಯುಧ ತಯಾರಿಕೆಗೆ ಅವಶ್ಯವಾದ ಶಿಲಾಪದರಗಳು ಇಲ್ಲ. ಇಲ್ಲಿ ಶಿಲಾಯುಗ ಅವಶೇಷಗಳು ದೊರಕುವದಿಲ್ಲ. ಎತ್ತರವಾದ ಪ್ರಾಚೀನ ಮೆಕ್ಕಲು ಮಣ್ಣಿನ ಬಯಲುಗಳ ಪ್ಲೀಸ್ಟೋಸೀನ್ ಯುಗದ ನದಿಮಟ್ಟಗಳು ಶಿಲಾಯುಗ ಸಂಸ್ಕøತಿಗಳ ಬೆಳವಣಿಗೆಗೆ ಸಹಾಯಕವಾಗಿವೆ. ಆದರೆ ಇಲ್ಲಿ ಭೂಶೋಧನೆಗಳು ಹೆಚ್ಚಿಗೆ ನಡೆದಿಲ್ಲ. ಅಲ್ಲಲ್ಲಿ ಕೆಲವು ಮಧ್ಯಶಿಲಾಯುಗದ ಮತ್ತು ಅನಂತರ ಕಾಲದ ಅವಶೇಷಗಳು ಕಂಡುಬಂದಿವೆ. ಕೊನೆಯದಾಗಿ ಉತ್ತರ ಮತ್ತು ಪಶ್ಚಿಮ ಭಾಗಗಳು ಶಿಲಾಯುಗ ಸಂಸ್ಕøತಿಗಳ ದೃಷ್ಟಿಯಿಂದ ಮುಖ್ಯವಾದವು. ಭಾರತದ ಅತ್ಯಂತ ಪ್ರಾಚೀನ ಶಿಲಾಪದರಗಳು ಎಲ್ಲಿವೆ. ಇವು ಪರ್ಯಾಯ ದ್ವೀಪೀಯ ಭಾರತದ ಪ್ರಾಚೀನತಮ ಶಿಲಾರಾಶಿಯ ಭಾಗಗಳಾಗಿವೆ. ಈಚಿನ ವರ್ಷಗಳಲ್ಲಿ ಈ ಪ್ರದೇಶಗಳಲ್ಲಿ ಕೆಲವು ಶಿಲಾಯುಗ ನೆಲೆಗಳನ್ನು ಶೋಧಿಸಲಾಗಿದೆ.

	1865ರಲ್ಲಿ ಬಾಲ್ ಎಂಬವರು ಕೆಲವು ಶಿಲಾಯುಧಗಳನ್ನು ಸಂಗ್ರಹಿಸಿದರು. ಅನಂತರ ಒಂದು ಶತಮಾನ ಕಾಲ ಬಂಗಾಲದಲ್ಲಿ ಪ್ರಾಕ್ತನ ಶೋಧನೆಗಳು ನಡೆಯಲಿಲ್ಲ. 1968-1969ರಲ್ಲಿ ಕೃಷ್ಣಸ್ವಾಮಿಯವರು ಸಂಶೋಧನೆಗಳನ್ನು ನಡೆಸಿದರು. ಅನಂತರ ಕಲ್ಕತ್ತ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗ ಮತ್ತು ರಾಜ್ಯದ ಪ್ರಾಚ್ಯ ವಸ್ತು ಇಲಾಖೆ ಈ ಕಾರ್ಯವನ್ನು ಮುಂದುವರಿಸಿವೆ.

	ಬಂಕುರಾ, ಪುರುಲಿಯಾ, ಬೀರ್‍ಭೂಮ್ ಮತ್ತು ಮಿಡ್ನಾಪುರ ಜಿಲ್ಲೆಗಳಲ್ಲಿ ದೊರಕಿರುವ ಆಯುಧಗಳ ವಿಶ್ಲೇಷಣೆಯಿಂದ ಕ್ಲಾಕ್ಟೋನಿಯ ಲೆವಾಲ್ವಾಸಿಯನ್ ಚಕ್ಕೆ ಕಲ್ಲಿನ ಆಯುಧಗಳು, ಅಬ್ಬೆವಿಲಿಯನ್ ಮತ್ತು ಅಷ್ಯೂಲಿಯನ್ ಹಂತದ ಕೈಗೊಡಲಿ ಮತ್ತು ಕ್ಲೀವರ್ ಕೊಡಲಿಗಳು ಮತ್ತು ಸಂಬಂಧಿಸಿದ ಇತರ ಆಯುಧ ರೀತಿಗಳು ಕಂಡುಬಂದಿವೆ. ಇವನ್ನು ಆದಿಶಿಲಾಯುಗಕ್ಕೆ ನಿರ್ದೇಶಿಸಬಹುದು. ಮಧ್ಯಶಿಲಾಯುಗಕ್ಕೆ ಸೇರುವ ಚಕ್ಕೆಕಲ್ಲಿನ ಆಯುಧಗಳನ್ನು ಬೀರ್‍ಭೂಮ್ ಮತ್ತು 24 ಪರಗಣ ಜಿಲ್ಲೆಯ ಕೆಲವು ನೆಲೆಗಳಿಂದ ಸಂಗ್ರಹಿಸಲಾಗಿದೆ. ಈ ಮೇಲಿನ ಸಂಸ್ಕøತಿಗಳ ಅವಶೇಷಗಳು ನದಿ ಪದರಗಳಲ್ಲಿ ಇತರ, ಅನಂತರದ ಕಾಲದ, ಅವಶೇಷಗಳನ್ನೊಳಗೊಂಡಿರುವ ಪದರಗಳ ಕೆಳಗೆ ದೊರಕಿರುವುದರಿಂದಲೂ ಹಿಂದಿನ ಪ್ರಾಣಿಗಳ ಪಳೆಯುಳಿಕೆಗಳೊಂದಿಗೆ ಇರುವುದರಿಂದಲೂ ಈ ಸಂಸ್ಕøತಿಗಳನ್ನು ಮಧ್ಯ ಪ್ಲಿಸ್ಟೋಸೀನ್ ಯುಗಕ್ಕೆ ನಿರ್ದೇಶಿಸಬಹುದು. ಬಂಗಾಲದ ಪೂರ್ವ ಶಿಲಾಯುಗ ಮಾನವನ ಪರಿಸರ ಮತ್ತು ಸಾಂಸ್ಕøತಿಕ ಸಿದ್ಧತೆ ಆ ಕಾಲದಲ್ಲಿ ಭಾರತದ ಇತರ ಪ್ರದೇಶಗಳಲ್ಲಿದ್ದ ಮಾನವರಂತೆ ಇದ್ದುದರಲ್ಲಿ ಸಂದೇಹವಿಲ್ಲ. ಕೊನೆಯ ಪೂರ್ವ ಶಿಲಾಯುಗಕ್ಕೆ ಸೇರುವ ಕೂರಲಗು ಫಲಕಗಳ ಸಂಸ್ಕøತಿಯ ಅವಶೇಷಗಳು ಈವರೆಗೆ ಅಲ್ಲಿ ಕಂಡು ಬರಲಿಲ್ಲ.

	ಅನಂತರಕಾಲದ ಸೂಕ್ಷ್ಮಶಿಲಾಯುಧ ಸಂಸ್ಕøತಿಯ ಅವಶೇಷಗಳು ಕೆಲವೆಡೆಗಳಲ್ಲಿ ಕಂಡುಬಂದಿದೆ. ಇವುಗಳಲ್ಲಿ ಮುಖ್ಯವಾದ ನೆಲೆ ಬದ್ರ್ವಾನ್ ಜಿಲ್ಲೆಯ ದಾಮೋದರ್ ಕಣಿವೆಯಲ್ಲಿ ದುರ್ಗಾಪುರದ ಬಳಿ ಇರುವ ಬೀರ್‍ಭಾನ್‍ಪುರ. 1937ರಲ್ಲಿ ಮೊದಲಿಗೆ ಎನ್. ಜಿ. ಮಜುಮ್‍ದಾರ್, ಮತ್ತೆ 1954ರಲ್ಲಿ ಬಿ.ಬಿ. ಲಾಲ್ ಈ ನೆಲೆಯಲ್ಲಿ ಸೂಕ್ಷ್ಮಶಿಲಾಯುಧಗಳನ್ನು ಗುರ್ತಿಸಿದರು. 1957ರಲ್ಲಿ ಲಾಲ್ ಇಲ್ಲಿ ಉತ್ಪನನಗಳನ್ನು ನಡೆಸಿದಾಗ ಅದರ ಸಾಂಸ್ಕøತಿಕ ವಿವರಗಳು ತಿಳಿದುಬಂದವು. ಈ ವಿಸ್ತಾರವಾದ ನೆಲೆ ದಾಮೋದರ ನದಿಯ ಪ್ರಾಚೀನ ನದಿಯ ಮಟ್ಟದ ಮೇಲೆ ಇದೆ. ಹಳ್ಳದಿಬ್ಬಗಳಿಂದ ಕೂಡಿದ ಈ ಭೂಪದರಗಳಲ್ಲಿ ಸೂಕ್ಷ್ಮ ಶಿಲಾಯುಧ ಸಂಸ್ಕøತಿಯ ಕರ್ತೃಗಳಾದ ಮಾನವರು ತಮ್ಮ ವಸತಿಗಳನ್ನು ಸ್ಥಾಪಿಸಿದರು. ಅಲ್ಲಿ ಕಂಡುಬಂದಿರುವ ಅನೇಕ ಕಂಬಗಳನ್ನು ಹೂತಿದ್ದ ಕುಳಿಗಳಿಂದ ಅವರ ಗುಡಿಸಿಲುಗಳ ಅಸ್ತಿತ್ವ ಮತ್ತು ಆಕಾರ ತಿಳಿದುಬರುತ್ತದೆ. ಕೊರಲಗು ಫಲಕಗಳು, ಮುಕ್ಕೋಣದ ಅರ್ಧ ಚಂದ್ರಾಕೃತಿಯ ಮತ್ತು ಮೊನಚಾದ ತುದಿಗಳಿದ್ದ ಆಯುಧಗಳು, ಕೊರೆಯುವ ಮತ್ತು ಹೆರೆಯುವ ಆಯುಧಗಳು ಪ್ರಮುಖ ಆಯುಧರೀತಿಗಳಾಗಿದ್ದುವು. ಆ ಕಾಲದಲ್ಲಿ ತಕ್ಕಮಟ್ಟಿಗೆ ತೇವದಿಂದ ಕೂಡಿದ ವಾತಾವರಣವಿದ್ದಂತೆ ತಿಳಿದುಬರುತ್ತದೆ. ಅನಂತರ ಕಾಲದಲ್ಲಿ ಕ್ರಮೇಣ ಒಣಹವೆ ಹೆಚ್ಚಾಗಿ ಬಿರುಗಾಳಿಯ ಪ್ರಭಾವದಿಂದ ಮರಳುದಿಬ್ಬಗಳು ಉಂಟಾದುವು. ಇದಲ್ಲದೆ ಸಂತಾಲ್ ಪರಗಣ, ಬಂಕರಾ ಮತ್ತು ಬರ್ದ್‍ವಾನ್ ಜಿಲ್ಲೆಯ ಹಲವು ಎಡೆಗಳಲ್ಲೂ ಆ ಕಾಲದ ನೆಲೆಗಳು ಕಾಣಬಂದಿದೆ. ಮಿಡ್ನಾಪುರ ಜಿಲ್ಲೆಯ ಖರ್ಸೋಟಿ ನೆಲೆಯಲ್ಲಿ ಸಿಕ್ಕಿರುವ ಸೂಕ್ಷ್ಮ ಶಿಲಾಯುಧಗಳು ಬೀರ್‍ಭಾನ್ ಪುರದ ಸಂಸ್ಕøತಿಯನ್ನು ಹೋಲುತ್ತವೆ. ಸಾಮಾನ್ಯವಾಗಿ ಈ ನೆಲೆಗಳೆಲ್ಲ ಗಂಗಾ ನದಿಯ ದಕ್ಷಿಣಕ್ಕೆ ಬಿಹಾರ-ಒರಿಸ್ಸ ರಾಜ್ಯಗಳ ನೆರೆಯಲ್ಲಿ ಛೋಟಾನಾಗಪುರ ಪ್ರಸ್ಥಭೂಮಿಯ ಈಶಾನ್ಯ ಭಾಗದಲ್ಲಿ ಕಂಡುಬರುತ್ತವೆ. ಲಾಲ್ ಅವರ ಅಧ್ಯಯನದ ರೀತ್ಯ ಈ ಸೂಕ್ಷ್ಮ ಶಿಲಾಯುಧ ಸಂಸ್ಕøತಿಯ ಕಾಲ ಕ್ರಿ. ಪೂ. ಸುಮಾರು 4000.

	ನವಶಿಲಾಯುಗ-ತಾಮ್ರಶಿಲಾಯುಗ ಸಂಸ್ಕøತಿಗಳ ಅವಶೇಷಗಳು ಬಂಗಾಲದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ದೊರಕಿವೆಯೆಂದು ಹೇಳಬಹುದು. ಈ ಪ್ರದೇಶಗಳನ್ನು ಭೌಗೋಳಿಕವಾಗಿ ಎರಡು ಭಾಗಗಳಾಗಿ ವಿಂಗಡಿಸಬಹುದು. ಪ್ರಾಚೀನ ಶಿಲಾಸ್ತೋಮಗಳನ್ನೊಳಗೊಂಡ ನೈಋತ್ಯ ಭಾಗ ಅಥವಾ ಪಶ್ಚಿಮ ಬಂಗಾಲದ ಬಂಕುರಾ ಬೀರ್‍ಭೂಮ್, ಪುರುಲಿಯಾ ಮತ್ತು ಮಿಡ್ನಾಪುರ ಜಿಲ್ಲೆಗಳು, ಛೋಟಾನಾಗಪುರ ಪ್ರಸ್ಥಭೂಮಿಯ ಭಾಗ, ಮತ್ತು ಉತ್ತರ ಬಂಗಾಲದ ಡಾರ್ಜಿಲಿಂಗ್ ಪ್ರದೇಶ-ಇದು ಪಿಲಾಂಗ್ ಪ್ರಸ್ಥಭೂಮಿಯ ಭಾಗ, ಈ ಪ್ರದೇಶದ ನವಶಿಲಾಯುಗ-ತಾಮ್ರ ಶಿಲಾಯುಗ ಸಂಸ್ಕøತಿ ಭಾರತದ ಇತರ ಭಾಗಗಳದಕ್ಕಿಂತ ವಿವರಗಳಲ್ಲಿ ಸ್ವಲ್ಪ ಮಟ್ಟಿಗೆ ಬೇರೆಯಾಗಿದೆ. ಇದರ ಕಾರಣವೆಂದರೆ ದಕ್ಷಿಣ ಭಾರತದ ನವಶಿಲಾಯುಗ ಮತ್ತು ಪಶ್ಚಿಮ ಮಧ್ಯಭಾರತದ ತಾಮ್ರಶಿಲಾಯುಗ ಸಂಸ್ಕøತಿಗಳ ಪ್ರಭಾವ ದೂರದ ಈ ಗಡಿ ಪ್ರದೇಶದಲ್ಲಿ ಪ್ರಸಾರವಾಗಿರುವುದು. ಬಹುಶಃ ಈ ಕಾರಣದಿಂದ ಇದರ ಕಾಲಾಮಾನ ಸಹ ಸ್ವಲ್ಪ ಈಚಿನದಾಗಬಹುದು. ಅಂತೆಯೇ ಉತ್ತರಭಾಗದ ಡಾರ್ಜಿಲಿಂಗ್ ಪ್ರದೇಶದ ನವಶಿಲಾಯುಗ ಸಂಸ್ಕøತಿ ಅಸ್ಸಾಂ ಪ್ರದೇಶದ ಆ ಸಂಸ್ಕøತಿಯ ಗುಂಪಿಗೆ ಸೇರುತ್ತದೆ. ಈವರೆಗೆ ಬರ್ದ್‍ವಾನ್ ಜಿಲ್ಲೆಯ ಪಾಂಡು ರಾಜರ್ ಧೀಬಿಯಲ್ಲಿ ಹೆಚ್ಚಿನ ಸಂಶೋಧನೆಗಳೂ ಬೀರ್‍ಭೂಮ್ ಜಿಲ್ಲೆಯ ಮಹಿಸ್‍ದೆಲ್, ನಾನೂರ್, ಹರಿಯಾಪುರ, ಬಂಕುರಾಜಿಲ್ಲೆಯ ತುಳಸಿಪುರ ಇವುಗಳಲ್ಲಿ ಪ್ರಾಯೋಗಿಕ ಶೋಧನೆಗಳೂ ನಡೆದಿದ್ದು, ಇವುಗಳಿಂದ ಈ ಸಂಸ್ಕøತಿಯ ಸ್ಥೂಲ ರೂಪ ತಿಳಿದುಬರುತ್ತದೆ. ಇವಲ್ಲದೆ ಮಿಡ್ನಾಪುರ ಮತ್ತು ಬಂಕುರಾ ಜಿಲ್ಲೆಯ ಕೆಲವು ಎಡೆಗಳಲ್ಲಿ ಈ ಸಂಸ್ಕøತಿಯ ಅವಶೇಷಗಳನ್ನು ಗುರುತಿಸಲಾಗಿದೆ. ಪಶ್ಚಿಮ ಬಂಗಾಲದ ಪ್ರಸ್ಥಭೂಮಿ ಪ್ರದೇಶದ ನವಶಿಲಾಯುಗ ತಾಮ್ರಶಿಲಾಯುಗ ಸಂಸ್ಕøತಿ ಬತ್ತದ ವ್ಯವಸಾಯವನ್ನು ಆಧರಿಸಿತ್ತು. ಅದು ಸಮುದ್ರದಾಚೆಯ ದೇಶಗಳ ಸಂಸ್ಕøತಿಗಳೊಡನೆಯೂ ಸಂಪರ್ಕ ಹೊಂದಿದ್ದಿರಬಹುದು. ಈ ಜನರು ನಾಯಕರ ಹಿಡಿತದಲ್ಲಿದ್ದ ಸಣ್ಣ ಸಾಮಾಜಿಕ ಪಂಗಡಗಳಾಗಿ ಜೀವಿಸುತ್ತಿದ್ದಂತೆ ತಿಳಿದುಬರುತ್ತದೆ. ಇಡೀ ಪ್ರದೇಶದ ಸಾಂಸ್ಕøತಿಕ ಲಕ್ಷಣಗಳು ಒಂದೇ ರೀತಿಯವಾಗಿದ್ದರೂ ಒಂದೊಂದು ವಿಭಾಗದಲ್ಲೂ ಕೆಲವು ಬದಲಾವಣೆಗಳಿದ್ದಿರಬಹುದು. ಉದಾಹರಣೆಗೆ ವರ್ಣಚಿತ್ರಿತ ಅಥವಾ ಅಲಂಕಾರರಹಿತ ಕಪ್ಪು, ಕೆಂಪು ಬಣ್ಣದ, ಹೊಳಪು ಕೆಂಪು ಬಣ್ಣದ ಮತ್ತು ಜಾರುನಳಿಕೆಯ ಮಡಿಕೆಗಳು, ನಯಗೊಳಿಸಿದ ಕಲ್ಲಿನ ಕೊಡಲಿಗಳು, ಮೊದಲಾದ ಸಲಕರಣೆಗಳು ಸಾಧಾರಣವಾಗಿದ್ದರೂ ಪ್ರತಿಯೊಂದು ಪಂಗಡದ ಅನುವಂಶಿಕ ವೈವಿಧ್ಯದ ದೆಸೆಯಿಂದ ಸಾಂಸ್ಕøತಿಕ ಜೀವನದಲ್ಲಿ ಭಿನ್ನತೆ ಇದ್ದಂತೆ ತಿಳಿದುಬರುತ್ತದೆ.

	ಪಾಂಡುರಾಜರ ಧೀಬಿಯ ನೆಲೆಯಲ್ಲಿ ಈ ಸಂಸ್ಕøತಿಯ ಕಾಲದಲ್ಲಿ ಜನರು ಕಟ್ಟಿಸಿದ ನೆಲಗಟ್ಟಿನ ಮತ್ತು ಕೆಸರಿನಿಂದ ಲೇಪಿತವಾದ ತಡಿಕೆಗೋಡೆಗಳಿಂದ ಕೂಡಿದ ಗುಡಿಸಿಲುಗಳಲ್ಲಿ ವಾಸಿಸುತ್ತಿದ್ದರು. ಸಗಣಿ ಮತ್ತು ಸುಣ್ಣವನ್ನು ಬಳಿಯುತ್ತಿದ್ದುದಕ್ಕೂ ಮಾಹಿತಿಗಳಿವೆ. ಮರದ ಕಂಬಗಳ ಮೇಲೆ ನಿಲ್ಲಿಸಿದ ಚಾವಣಿಗೆ ಹುಲ್ಲಿನ ಅಥವಾ ಸುಣ್ಣದ ಹೆಂಚುಗಳ ಹೊದಿಕೆ ಇರುತ್ತಿತ್ತು. ಮನೆಗಳಲ್ಲಿ ಅಡುಗೆಯ ಒಲೆಗಳ ಅವಶೇಷಗಳನ್ನು ಗುರ್ತಿಸಲಾಗಿದೆ. ಸಾಮಾನ್ಯವಾಗಿ ಒಂದೇ ಕೋಣೆಯಿದ್ದ ಈ ಗುಡಿಸಿಲುಗಳ ನಿವಾಸಿಗಳು ಹಲವು ರೀತಿಯ ಮಡಕೆ ಕುಡಿಕೆಗಳನ್ನು ಬಳಸುತ್ತಿದ್ದರು. ಬತ್ತದ ಹೊಟ್ಟನ್ನು ಜೇಡಿಮಣ್ಣಿನಲ್ಲಿ ಕಲಸಿ ಕೈಯಿಂದ ರೂಪಿಸಿದ ದಪ್ಪ ಬೂದುಬಣ್ಣದ, ಅಥವಾ ಕುಂಬಾರ ಚಕ್ರದ ಮೇಲೆ ಮಾಡಿದ ಅಲಂಕಾರರಹಿತವಾದ ಮತ್ತು ತೆಳುವಾದ, ಅಥವಾ ತಿಳಿಕೆಂಪು ಬಣ್ಣದ ಮತ್ತು ಕಪ್ಪು-ಕೆಂಪು ಬಣ್ಣದ ಪಾತ್ರೆಗಳನ್ನು ಇವರು ಮೊದಮೊದಲು ಬಳಸುತ್ತಿದ್ದರು. ಸ್ವಲ್ಪ ಕಾಲದ ಅನಂತರ ಈ ಪಾತ್ರೆಗಳಲ್ಲಿ ಹೆಚ್ಚು ವೈವಿಧ್ಯ ಕಂಡುಬಂತಲ್ಲದೆ ವರ್ಣಚಿತ್ರಿತ ಪಾತ್ರೆಗಳೂ ಹೆಚ್ಚಾದುವು. ಇವರು ಅನೇಕ ಆಕಾರಗಳ ಪಾತ್ರೆಗಳನ್ನು ಬಳಸುತ್ತಿದ್ದರೆಂಬುದರಿಂದ ಈ ಜನರ ಗೃಹ ಜೀವನದ ಪರಿಪೂರ್ಣತೆಯ ಕಲ್ಪನೆ ಉಂಟಾಗುತ್ತದೆ. ಜಾರುವ ನಳಿಕೆಯ ಪಾತ್ರೆಗಳು, ಮತ್ತು ತೆಳುಭಾಗದಲ್ಲಿ ತೂತುಗಳಿದ್ದ ಮಡಿಕೆಗಳು ಇವರ ಸಂಪದ್ಯುಕ್ತ ಧಾರ್ಮಿಕ ಜೀವನ ಮತ್ತು ಆಹಾರ ತಯಾರಿಕೆಯ ಪದ್ಧತಿಗಳ ಬಗ್ಗೆ ಕೆಲವು ಸಂಗತಿಗಳನ್ನು ತಿಳಿಸುತ್ತವೆ. ಪಾತ್ರೆಗಳ ಮೇಲಿನ ಅಲಂಕರಣಗಳಲ್ಲಿ ಪ್ರಾಣಿ ಅಥವಾ ಮಾನವನ ಚಿತ್ರಗಳಿಲ್ಲದೆ ಸರಳರೇಖಾವಿನ್ಯಾಸಗಳು ಕಂಡುಬರುವುದರಿಂದ ಈ ವಿಚಾರದಲ್ಲಿ ಅವರು ಹೆಚ್ಚು ಪ್ರಗತಿ ಸಾಧಿಸಿರಲಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಈ ಕಾಲದ ಉತ್ತರಾರ್ಧ ಕಾಲಕ್ಕೆ ಸಂಬಂಧಿಸಿದಂತೆ ತಾಮ್ರದ ಸರಳ ಅಥವಾ ಅಲಂಕೃತ ಬಳೆಗಳು, ಬೆರಳುಂಗುರ, ಉಗುರು ಕತ್ತರಿ, ಕಾಡಿಕೆಕಡ್ಡಿ, ಮಣಿಗಳು, ಬಾಣದ ಮೊನೆ, ಈಟಿಮೊನೆ ಮೊದಲಾದ ಸಲಕರಣೆಗಳು ದೊರಕಿರುವುದರಿಂದ ಈ ಜನ ತಾಮ್ರ ಲೋಹಗಾರಿಕೆಯಲ್ಲಿ ಪರಿಶ್ರಮ ಪಡೆದಿದ್ದ ವಿಷಯ ತಿಳಿದುಬರುತ್ತದೆ. ಕಲ್ಲಿನ ಆಯುಧಗಳಲ್ಲಿ ಸೂಕ್ಷ್ಮ ಶಿಲಾಯುಧಗಳು ವೈವಿಧ್ಯಪೂರ್ಣವಾಗಿವೆ. ನಯಗೊಳಿಸಿದ ಕೈಕೊಡಲಿಗಳು ದೊರಕಿವೆಯಾದರೂ ಅವು ಬಹುಶಃ ಅನಂತರ ಕಾಲದ ಸಂಸ್ಕøತಿಗೆ ಸೇರಿದುವೆಂದು ಊಹಿಸಲಾಗಿದೆ. ಮೂಳೆಯ ಹಲವಾರು ಆಯುಧಗಳೂ ಬಳಕೆಯಲ್ಲಿದುವು. ಅಕ್ಕಿ, ಮೀನು, ನೀಲ್‍ಗಾಯ್, ಜಿಂಕೆ ಮತ್ತು ಹಂದಿಯ ಮಾಂಸ ಆ ಜನರ ಮುಖ್ಯ ಆಹಾರಗಳಾಗಿದ್ದುವು.

	ಕಬ್ಬಿಣ ಯುಗದ ಕಾಲದಲ್ಲಿ ನವಶಿಲಾ-ತಾಮ್ರ ಶಿಲಾಯುಗದಲ್ಲಿದ್ದಕ್ಕಿಂತಲೂ ಜನಜೀವನ ರೀತಿ ಮತ್ತಷ್ಟು ಸುಧಾರಿಸಿತು. ಪಾಂಡುರಾಜರ್ ಧೀಬಿ, ಮಹಿಸಾದಲ್ ಮುಂತಾದ ಎಡೆಗಳಲ್ಲಿ ನಡೆಸಿದ ಉತ್ಖನನಗಳಲ್ಲಿ ಹೆಚ್ಚಿನ ತಾಮ್ರದ ಮತ್ತು ಹೊಸದಾಗಿ ಕಬ್ಬಿಣದ ಆಯುಧಗಳು ದೊರಕಿರುವುವಲ್ಲದೆ ಮೊದಲಿನ ನೆಲೆಯಲ್ಲಿ ಕಬ್ಬಿಣದ ಅದುರನ್ನು ಕರಗಿಸಲು ಉಪಯೋಗಿಸುತ್ತಿದ್ದ ಕುಲುಮೆಗಳು ಕಂಡು ಬಂದಿವೆ. ಗೃಹೋಪಯೋಗಿ ವಸ್ತುಗಳು ಹೆಚ್ಚು ಸುಧಾರಿತವಾಗಿರುವುದಲ್ಲದೆ ದಿನಬಳಕೆಯ ವಸ್ತುಗಳಲ್ಲಿ ವ್ಯವಸಾಯ ಕ್ರಮದಲ್ಲಿ, ಗೃಹನಿರ್ಮಾಣ ರೀತಿಗಳಲ್ಲಿ ಪ್ರಗತಿ ಕಾಣಬರುತ್ತದೆ. ಸತ್ತವರ ದೇಹಗಳನ್ನು ಗುಳಿಗಳಲ್ಲಿ ಅಥವಾ ಶವಜಾಡಿಗಳಲ್ಲಿ ಪೂರ್ಣರೂಪದಲ್ಲಿ ಅಥವಾ ಅಂಶಿಕವಾಗಿ ಹೂಡುತ್ತಿದ್ದರು. ಕಬ್ಬಿಣ ಯುಗದ ಸಂಸ್ಕøತಿಯ ವೇಳೆಗಾಗಲೇ ಇತಿಹಾಸಕಾಲ ಪ್ರಾರಂಭವಾಗುತ್ತದೆ.

	ನವಶಿಲಾ-ತಾಮ್ರಶಿಲಾಯುಗ ಸಂಸ್ಕøತಿಗಳು ಕ್ರಿ.ಪೂ. 1100-800ರ ನಡುವೆ ಮತ್ತು ಕಬ್ಬಿಣಯುಗದ ಸಂಸ್ಕøತಿ ಅನಂತರದ ಕಾಲದಲ್ಲಿ ಅಸ್ತಿತ್ವದಲ್ಲಿದ್ದುದಾಗಿ ತಿಳಿದುಬಂದಿದೆ.

	ಇತಿಹಾಸ: ವೇದಗಳ ಮತ್ತು ಉಪನಿಷತ್ತುಗಳ ಕಾಲದ ಬಂಗಾಲ ಪ್ರದೇಶದ ಚಾರಿತ್ರಿಕ ಮಾಹಿತಿಗಳು ನಮಗೆ ಲಭ್ಯವಿಲ್ಲ. ಆ ಕಾಲದಲ್ಲಿ ಪ್ರಾಗೈತಿಹಾಸಿಕ ತಾಮ್ರಶಿಲಾಯುಗದ, ಕಬ್ಬಿಣಯುಗದ ಸಂಸ್ಕøತಿಗಳು ಈ ಪ್ರದೇಶದಲ್ಲಿ ಆಸ್ತಿತ್ವದಲ್ಲಿದ್ದವು. ಕಬ್ಬಿಣಯುಗದ ಕಾಲಕ್ಕೆ ಅಂದರೆ ಕ್ರಿ.ಪೂ. 6ನೆಯ ಶತಮಾನದ ಸುಮಾರಿಗೆ ಈ ಪ್ರದೇಶದಲ್ಲಿ ಸುಹ್ಮ ಸಮತಟ ಮತ್ತು ವಂಗ ದಕ್ಷಿಣ ಭಾಗದಲ್ಲೂ ಪುಂಡ್ರ ಉತ್ತರಭಾಗದಲ್ಲೂ ಸಣ್ಣ ರಾಜ್ಯಗಳಾಗಿದ್ದುವೆಂದು ಜೈನಮೂಲಗಳಿಂದ ತಿಳಿದುಬರುತ್ತವೆ. ಇವುಗಳಲ್ಲಿ ವಂಗ ರಾಜ್ಯವೇ ಪ್ರಮುಖ. ಬಂಗಾಲವೆಂಬ ಅರ್ವಾಚೀನ ಹೆಸರು ಇದರಿಂದ ಹುಟ್ಟಿದ್ದು. ಧರ್ಮಸೂತ್ರಗಳ ಕಾಲದಲ್ಲಿ ಪೂರ್ವ ಮತ್ತು ಮಧ್ಯಬಂಗಾಲ ಪ್ರದೇಶಗಳು ಇದರಲ್ಲಿ ಸೇರಿದ್ದವು. ಆ ವೇಳೆಗೆ ಪಶ್ಚಿಮ ಮತ್ತು ವಾಯುವ್ಯ ಭಾಗಗಳನ್ನು ಗೌಡದೇಶವೆಂದು ಕರೆಯಲಾಗುತ್ತಿತ್ತು. ಕ್ರಿ.ಪೂ. 5-4 ನೆಯ ಶತಮಾನದಲ್ಲಿ ಮಗಧ ಸಾಮ್ರಾಜ್ಯ ಸ್ಥಾಪನೆಯಾದಾಗ ಬಂಗಾಲದ ಬಹು ಭಾಗ ಅದರಲ್ಲಿ ಸೇರಿದ್ದಂತೆ ತಿಳಿದುಬರುತ್ತದೆ. ಕ್ರಿ.ಪೂ. 4ನೆಯ ಶತಮಾನದ ಕೊನೆಯಲ್ಲಿ ಮೌರ್ಯ ಸಾಮ್ರಾಜ್ಯ ಸ್ಥಾಪನೆಯಾದಾಗ ಇಡೀ ಬಂಗಾಲ ಅದರಲ್ಲಿ ಸೇರಿತು. ಮೌರ್ಯ ಸಾಮ್ರಾಜ್ಯದ ಪತನಾನಂತರ ಆ ಪ್ರದೇಶದ ಬಗ್ಗೆ ಹೆಚ್ಚು ವಿಷಯ ತಿಳಿದುಬರುವುದಿಲ್ಲ. ಮತ್ತೆ ಕ್ರಿ.ಶ. 4ನೆಯ ಶತಮಾನದ ಅದಿಭಾಗದಲ್ಲಿ ಗುಪ್ತ ಸಾಮ್ರಾಜ್ಯ ಸ್ಥಾಪನೆಯಾದಾಗ ಬಂಗಾಲದ ಹೆಚ್ಚು ಪ್ರದೇಶ ಅದರಲ್ಲಿ ಲೀನವಾಯಿತು. ಸಮುದ್ರಗುಪ್ತ ಪಶ್ಚಿಮ ಬಂಗಾಲದ ಚಂದ್ರ ವರ್ಮವನ್ನು (ಬಂಕುಠಾ ಜಿಲ್ಲೆ) ಸೋಲಿಸಿ ತನ್ನ ಸಾಮ್ರಾಜ್ಯದಲ್ಲಿ ಆ ಪ್ರದೇಶವನ್ನು ಸೇರಿಸಿದ. ಸಮತಟ ಮತ್ತು ಕಾಮರೂಪ (ಅಸ್ಸಾಂ) ಪ್ರಾಂತ್ಯದ ರಾಜರು ಸಾಮಂತರಾಗಿ ಕಪ್ಪಕಾಣಿಕೆಗಳನ್ನು ಕೊಡಲೊಪ್ಪಿಸಿದರು. 6ನೆಯ ಶತಮಾನದ ಮಧ್ಯಕಾಲದವರೆಗೂ ಬಂಗಾಲ ಗುಪ್ತ ಚಕ್ರವರ್ತಿಗಳ ವಶದಲ್ಲಿದ್ದಿರಬಹುದು.

	ಗುಪ್ತ ಯುಗದ ಅನಂತರ ಆ ಪ್ರದೇಶದಲ್ಲಿ ಎರಡು ಸ್ವತಂತ್ರ್ಯ ರಾಜ್ಯಗಳು ಹುಟ್ಟಿಕೊಂಡುವು. ಗೌಡ ರಾಜ್ಯ ಉತ್ತರ ಮತ್ತು ಪಶ್ಚಿಮ ಪ್ರದೇಶಗಳನ್ನೊಳಗೊಂಡಿತ್ತು. ಬಹುಶಃ 507ರ ಸುಮಾರಿಗೆ ಗೋಪಚಂದ್ರ ಸ್ವಾತಂತ್ರ್ಯ ಘೋಷಿಸಿದ. ಈ ವಂಶದ ಗೋಪಚಂದ್ರ, ಧರ್ಮಾದಿತ್ಯ ಸಮಾಚಾರದೇವ ಇವರು ಮಹಾರಾಜಾಧಿರಾಜ ಎಂಬ ಬಿರುದುಗಳನ್ನು ಧರಿಸಿದ್ದರಲ್ಲದೆ ಗುಪ್ತ ನಾಣ್ಯಗಳ ಮಾದರಿಯ ಚಿನ್ನದ ನಾಣ್ಯಗಳನ್ನು ಟಂಕಿಸಿದ್ದರು. ಇವರು 525-575ರ ನಡುವೆ ರಾಜ್ಯವಾಳಿದಂತೆ ಕಾಣುತ್ತದೆ. ಪೂರ್ವ ಬಂಗಾಲದಲ್ಲಿ ಆಳಿದ ಪೃಥುವೀರ ಮತ್ತು ಸುಧನ್ಯಾದಿತ್ಯ ಎಂಬವರ ನಾಣ್ಯಗಳು ದೊರಕಿವೆಯಾದರೂ ಅವರ ಬಗ್ಗೆ ಏನೂ ಮಾಹಿತಿಗಳಿಲ್ಲ. ಬಹುಶಃ ಇವರ ರಾಜ್ಯ ಪೂರ್ವ ಮತ್ತು ದಕ್ಷಿಣ ಬಂಗಾಲನ್ನೊಳಗೊಂಡಿದ್ದ ವಂಗರಾಜ್ಯ. ಪೂರ್ವದಲ್ಲಿದ್ದ ಸಮತಟದ ಹೆಸರು ಉಳಿದು ಬಂದರೂ ಅದು ವಂಗರಾಜ್ಯದಲ್ಲಿ ಸೇರಿಹೋಯಿತು.

	ಮಹಾಸೇನ ಗುಪ್ತ (ಉತ್ತರಕಾಲೀನ ಗುಪ್ತದೊರೆ) 6ನೆಯ ಶತಮಾನದ ಕೊನೆಗಾಲದಲ್ಲಿ ಅಧಿಕಾರ ಕಳೆದುಕೊಂಡಾಗ ಗೌಡ ದೇಶದಲ್ಲಿ ಪ್ರಸಿದ್ಧಿಗೆ ಬಂದ ಶಶಾಂಕ ಬಂಗಾಲದ ಇತಿಹಾಸದಲ್ಲಿ ಪ್ರಸಿದ್ಧ ದೊರೆ. ಇವನ ರಾಜಧಾನಿ ಕರ್ಣಸುವರ್ಣ (ಬಹುಶಃ ಅರ್ವಾಚೀನ ರಂಗಮತಿ, ಮುರ್ಷಿದಾಬಾದ್ ಜಿಲ್ಲೆ) ಇವನ ರಾಜ್ಯದಲ್ಲಿ ದಕ್ಷಿಣ ಮತ್ತು ಪೂರ್ವ ಭಾಗಗಳು ಸೇರಿದ್ದ ವಿಷಯ ಖಚಿತವಾಗಿ ತಿಳಿದುಬಂದಿಲ್ಲ. ಆದರೆ ಮಗಧ ಮತ್ತು ಒರಿಸ್ಸಾದ ಬಹುಭಾಗ ಇವನ ವಶದಲ್ಲಿದ್ದುವು. ಪೂರ್ವದಲ್ಲಿ ಕಾಮರೂಪದ ಭಾಸ್ಕರ ವರ್ಮ ಮತ್ತು ಪಶ್ಚಿಮದಲ್ಲಿ ಕನೌಜಿನ ಮೌಕರಿಗ್ರಹವರ್ಮ ಇವನ ಶತ್ರುಗಳಾಗಿದ್ದರು. ಅದ್ದರಿಂದ ಮೌಲ್ವದ ದೇವಗುಪ್ತನೊಂದಿಗೆ ಇವನು ಸಖ್ಯ ಬೆಳೆಸಿದ. ಗ್ರಹವರ್ಮವನ್ನು ಇವನು ಯುದ್ಧದಲ್ಲಿ ಸಾಣೇಶ್ವರದ ಪುಷ್ಯಭೂತಿ ವಂಶದೊಂದಿಗೆ ಹಗೆತನ ಬೆಳೆಯಿತು. ಆ ವಂಶದ ರಾಜ್ಯವರ್ಧನ ಈ ಯುದ್ಧಗಳಲ್ಲಿ ಸತ್ತಾಗ (606) ಅವನ ತಮ್ಮ ಹರ್ಷನಿಗೂ ಇವನಿಗೂ ವೈರವುಂಟಾಯಿತು. ಹರ್ಷ ಶಶಾಂಕನೊಂದಿಗೆ ಹೋರಾಡಿದುದಕ್ಕೆ ಮಾಹಿತಿಗಳಿಲ್ಲ, ಮತ್ತು ಶಶಾಂಕ 619ರ ವರೆಗೂ ಗೌಡಾಧಿಪನಾಗಿದ್ದುದಕ್ಕೆ ಆಧಾರಗಳಿವೆ. ಬಹುಶಃ 636-37ರವರೆಗೂ ಅವನು ಆಧಿಕಾರದಲ್ಲಿದ್ದನೆಂದು ಹ್ಯೂಯೆನ ತ್ಸಾಂಗನ ಬರವಣಿಗೆಗಳಿಂದ ತಿಳಿದು ಬರುತ್ತದೆ. ಅವನು ಬೌದ್ಧಮತ ದ್ವೇಷಿಯಾಗಿದ್ದನೆಂದು ಹ್ಯೂಯೆನ ತ್ಸಾಂಗ್ ತಿಳಿಸಿದ್ದಾನಾದರೂ ಆ ವಿಷಯ ಸಂದೇಹಾಸ್ಟದ. ಬಂಗಾಲವನ್ನು ಸ್ವತಂತ್ರಗೊಳಿಸಿದ್ದಲ್ಲದೆ ಬಿಹಾರ, ಒರಿಸ್ಸಾಗಳಲ್ಲಿ ತನ್ನ ಪ್ರಭುತ್ವ ಸ್ಥಾಪಿಸಿದ ಕೀರ್ತಿ ಅವನಿಗೆ ಸಲ್ಲುತ್ತದೆ.

	ಶಶಾಂಕನ ಮರಣಾನಂತರದ ಬಂಗಾಲದ ಚರಿತ್ರೆ ಸ್ಪಷ್ಟವಾಗಿಲ್ಲ. ಬಹುಶಃ ಬಂಗಾಲ ಹರ್ಷನ ಅಧಿಪತ್ಯಕ್ಕೂ ತರುವಾಯ ಕಾಮರೂಪದ ಭಾಸ್ಕರವರ್ಮನೆ ಪ್ರಭುತ್ವಕ್ಕೂ ಸೇರಿದ್ದಿರಬಹುದು. 650ರ ಅನಂತರ ಬಂಗಾಲದಲ್ಲಿ ಐದು ಸಣ್ಣ ರಾಜ್ಯಗಳು-ಕಜಂಗಲ (ರಾಜ್‍ಮಹಲ್ ಪ್ರದೇಶ), ಪುಂಡ್ರ ವರ್ಧನ (ಉತ್ತರ ಬಂಗಾಲ ಕರ್ಣಸುವರ್ಣ ಮತ್ತು ತಾಮ್ರ ಲಿಪಿ (ಪಶ್ಚಿಮ ಬಂಗಾಲ) ಮತ್ತು ಸಮತಟ (ಪೂರ್ವ ಬಂಗಾಲ) ಅಸ್ತಿತ್ವದಲ್ಲಿದ್ದವು. ಆ ರಾಜ್ಯಗಳಲ್ಲಿ ಆಂತರಿಕ ಕಲಹಗಳು ನಡೆಯುತ್ತಿದ್ದು ಅರಾಜಕತೆ ಹಬ್ಬಿತ್ತು. ಸ್ವಲ್ಪ ಕಾಲಾನಂತರ ಜಯನಾಗ ಗೌಡದೇಶದಲ್ಲಿ ಒಂದು ಸ್ವತಂತ್ರ ರಾಜ್ಯ ಸ್ಥಾಪಿಸಿದ. ಅವನ ಕಾಲಮಾನ ನಿರ್ದಿಷ್ಟವಾಗಿ ತಿಳಿದಿಲ್ಲವಾದರೂ ಭಾಸ್ಕರವರ್ಮನ ಮರಣಾನಂತರ ಸ್ವಲ್ಪ ಕಾಲದಲ್ಲೇ ಇವನಿದ್ದಿರಬೇಕು. ಕರ್ಣಸುವರ್ಣದಿಂದ ಇವನು ಹೊರಡಿಸಿದ ಶಾಸನವೊಂದು ದೊರಕಿದೆ. ಇವನು ಶಕ್ತಿಶಾಲಿ ರಾಜನೆಂಬುದು ಈತನ ಮಹಾರಾಜಾಧಿರಾಜನೆಂಬ ಬಿರುದಿನಿಂದಲೂ ನಾಣ್ಯಗಳಿಂದಲೂ ತಿಳಿದು ಬಂದರೂ ಇವನ ಉತ್ತರಾಧಿಕಾರಿಗಳ ವಿಚಾರವಾಗಿಯೂ ರಾಜ್ಯವಿಸ್ತಾರದ ವಿಚಾರವಾಗಿಯೂ ಏನೂ ಗೊತ್ತಾಗಿಲ್ಲ. ವಂಗ ಅಥವಾ ಪೂರ್ವ ಬಂಗಾಲದ ಬಗ್ಗೆ ಹೆಚ್ಚಿನ ವಿವರಗಳು ದೊರಕಿವೆ. ಹ್ಯೂಯೆನ್ ತ್ಸಾಂಗನ ಕಾಲದಲ್ಲಿ (ಎಂದರೆ 7ನೆಯ ಶತಮಾನದ ಪೂರ್ವಾರ್ಧದಲ್ಲಿ) ಅಲ್ಲಿ ಬ್ರಾಹ್ಮಣ ವಂಶ ಅಧಿಕಾರದಲ್ಲಿತ್ತು. ನಾಲಂದ ವಿದ್ಯಾಲಯದ ಮುಖ್ಯಸ್ಥ ಆ ಮನೆತನಕ್ಕೆ ಸೇರಿದವನಾಗಿದ್ದ. ಸ್ವಲ್ಪ ಕಾಲದ ಅನಂತರ ಬೌದ್ಧಮತೀಯ ರಾಜವಂಶ ಅವರಿಂದ ಆಧಿಕಾರ ಕಸಿದುಕೊಂಡಿತು. ಖಡ್ಗ ವಂಶದ ಆ ರಾಜರಲ್ಲಿ ಖಡ್ಗೋದ್ಯಮ, ಜಾತಖಡ್ಗ, ದೇವಖಡ್ಗ ಮತ್ತು ರಾಜರಾಜಭಟ ಎಂಬವರ ಬಗ್ಗೆ ಮಾಹಿತಿಗಳು ದೊರಕಿವೆ. ಇತ್ಸಿಂಗ್ ಪ್ರಸ್ತಾಪಿಸಿರುವ ರಾಜಭಟನೇ ಬಹುಶಃ ಆ ವಂಶದ ರಾಜರಾಜ ಭಟ. 7ನೆಯ ಶತಮಾನದ ಉತ್ತರಾರ್ಧದಲ್ಲಿ ಪೂರ್ವ, ದಕ್ಷಿಣ ಮತ್ತು ಮಧ್ಯ ಬಂಗಾಲದಲ್ಲಿ ಆ ವಂಶ ಅಧಿಕಾರದಲ್ಲಿತ್ತೆಂದು ಹೇಳಬಹುದು. 8ನೆಯ ಶತಮಾನದ ಆದಿಭಾಗದಲ್ಲಿ ಉತ್ತರದಿಂದ ತೈಲವಂಶದವರು ಉತ್ತರ ಬಂಗಾಲವನ್ನು ಗೆದ್ದುದಾಗಿ ತಿಳಿದರೂ ವಿವರಗಳು ದೊರಕಿಲ್ಲ. ತರುವಾಯ 725-735ರ ನಡುವೆ ಯಶೋವರ್ಮ ಪಶ್ಚಿಮ ಪೂರ್ವ ಬಂಗಾಲವನ್ನು ಗೆದ್ದಂತೆ ತಿಳಿದುಬರುತ್ತದೆ. ಅನಂತರ ಕಾಶ್ಮೀರದ ಲಲಿತಾದಿತ್ಯ ಬಂಗಾಲವನ್ನು ಗೆದ್ದುದಾಗಿ ಕಲಹಿಣ ತಿಳಿಸಿದ್ದಾನೆ. ತರುವಾಯ ಬಂಗಾಲದಲ್ಲಿ ಅನೇಕ ಸಣ್ಣಪುಟ್ಟ ರಾಜ್ಯಗಳು ಹುಟ್ಟಿಕೊಂಡರೂ ಲಲಿತಾದಿತ್ಯನ ಮೊಮ್ಮಗ ಜಯಾಪೀಡ ಕಾಶ್ಮೀರದ ಸಿಂಹಾಸನವನ್ನು ಕಳೆದುಕೊಂಡಾಗ ತನ್ನ ಅಧೀನದಲ್ಲಿದ್ದ ಉತ್ತರ ಬಂಗಾಲದ ಪುಂಡ್ರವರ್ಧನನ ಜಯಂತನಲ್ಲಿ ಬಂದು ಅವನ ಮಗಳನ್ನು ವಿವಾಹವಾಗಿ ತನ್ನ ಮಾವನ ಯುದ್ಧಗಳಲ್ಲಿ ಭಾಗವಹಿಸಿ ಅವನ ಬಲವನ್ನು ಹೆಚ್ಚಿಸಿದುದಾಗಿ ಹೇಳಲಾಗಿದೆ. ತರುವಾಯ ಕಾಮರೂಪದ ಭಗದತ್ತ ವಂಶದ ಹರ್ಷ ಗೌಡಾಧಿಪನೆಂಬ ಬಿರುದು ಹೊಂದಿದ್ದುದಾಗಿ ನೇಪಾಲದ ಒಂದು ಶಾಸನ ತಿಳಿಸುತ್ತದೆ. ಶಾಸನಾಧಾರಗಳಿಂದ ಸಮತಟದಲ್ಲಿ ಆಳುತ್ತಿದ್ದ ರಾತ ವಂಶದ ಜೀವಧಾರಣ ಮತ್ತು ಶ್ರೀಧಾರಣ ಎಂಬವರ ಹೆಸರುಗಳು ಮತ್ತು ಪೂರ್ವ ಬಂಗಾಲದ ಲೋಕನಾಥ, ಜಯತುಂಗ ವರ್ಷ ಎಂಬವರ ಹೆಸರುಗಳು ತಿಳಿದುಬಂದರೂ ಅವರ ರಾಜ್ಯ ವಿಸ್ತಾರ ಮತ್ತು ಆಡಳಿತಗಳ ಬಗ್ಗೆ ಏನೂ ತಿಳಿದುಬಂದಿಲ್ಲ. ಪೂರ್ವ ಬಂಗಾಲದಲ್ಲಿ 8ನೆಯ ಶತಮಾನದ ಪೂರ್ವಾರ್ಧದಲ್ಲಿ ಚಂದ್ರ ಮನೆತನದ ಗೋವಿಂದಚಂದ್ರ ಮತ್ತು ಲಲಿತಚಂದ್ರರ ಹೆಸರುಗಳನ್ನು ಟಿಬೆಟ್ ಇತಿಹಾಸಕಾರ ತಾರಾನಾಥ ಉಲ್ಲೇಖಿಸಿದ್ದಾನೆ. 750ರಲ್ಲಿ ಪಾಲ ವಂಶದ ಸ್ಥಾಪನೆಯಾದಾಗ ಈ ಅರಾಜಕ ಪರಿಸ್ಥಿತಿ ಕೊನೆಗೊಂಡಿತು.

	ಬಂಗಾಲದ ಚರಿತ್ರೆಯಲ್ಲಿ ಪಾಲ ವಂಶ ಬಹಳ ಮಹತ್ತ್ವಪೂರ್ಣವಾದ್ದು. ಶಶಾಂಕನ ಮರಣೋತ್ತರದ ಒಂದು ಶತಮಾನದಲ್ಲಿ ಅನಾಯಕ ಪರಿಸ್ಥಿತಿಯಲ್ಲಿದ್ದ ದೇಶದ ಪುರೋಭಿವೃದ್ಧಿಗಾಗಿ ಅಲ್ಲಿಯ ನಾಯಕರು ಒಟ್ಟಾದರು. ಪುಂಡ್ರ ವರ್ಧನದಲ್ಲಿ ಉದಯಿಸಿ ವಂಗವಿಭಾಗದ ನಾಯಕನಾಗಿದ್ದ ಗೋಪಾಲನನ್ನು (750-770) ಇಡೀ ಬಂಗಾಲದ ಅಧಿರಾಜನನ್ನಾಗಿ ಆರಿಸಿದರು. ಪಾಲ ವಂಶ 750 ರಿಂದ 1155ರ ವರೆಗೂ ಬದಲಾಗುತ್ತಿದ್ದ ಭಾಗ್ಯದೊಂದಿಗೆ ರಾಜ್ಯವಾಳಿತು. ಧರ್ಮಪಾಲ (770-810) ಮತ್ತು ದೇವಪಾಲ (810-850) ಇವರು ರಾಜ್ಯವನ್ನು ವಿಸ್ತರಿಸಿ ಹೆಚ್ಚು ಕಡಿಮೆ ಇಡೀ ಉತ್ತರ ಭಾರತದಲ್ಲಿ ತಮ್ಮ ಸಾರ್ವಭೌಮತ್ವವನ್ನು ನೆಲೆಗೊಳಿಸಿದರು. ಮಾಳ್ವದ ಪ್ರತೀಹಾರ ವತ್ಸರಾಜನಿಂದ ಮತ್ತು ರಾಷ್ಟ್ರಕೂಟ ಧ್ರುವನಿಂದ ಧರ್ಮಪಾಲ ಸೋತನಾದರೂ ರಾಷ್ಟ್ರಕೂಟರ ಧಾಳಿಯಿಂದ ವತ್ಸರಾಜ ಹತನಾದಾಗ ಇವನು ಉತ್ತರ ಭಾರತದಲ್ಲಿ ಪ್ರಬಲನಾದ. ಇಂದ್ರಾಯುಧನನ್ನು ಕನೌಜ್ ಸಿಂಹಾಸನದಿಂದ ಇಳಿಸಿ ತನಗೆ ವಿಧೇಯನಾಗಿದ್ದ ಚಕ್ರಾಯುಧನನ್ನು ಸಿಂಹಾಸನದ ಮೇಲೆ ಕೂಡಿಸಿದ. ಸ್ವಲ್ಪ ಕಾಲದ ಅನಂತರ ವತ್ಸರಾಜನ ಮಗ ಇಮ್ಮಡಿನಾಗಭಟ ಚಕ್ರಾಯುಧನನ್ನು ಸಿಂಹಾಸನದಿಂದ ಓಡಿಸಿ ಪಾಲ ರಾಜ್ಯವನ್ನು ಜಯಿಸಿದ. ಆ ಸಮಯಕ್ಕೆ ಮತ್ತೆ ರಾಷ್ಟ್ರಕೂಟ ಮುಮ್ಮಡಿ ಗೋವಿಂದ ಉತ್ತರ ಭಾರತದ ಮೇಲೆ ದಾಳಿ ಮಾಡಿ ನಾಗಭಟನನ್ನು ಸೋಲಿಸಿ ಚಕ್ರಾಯುಧ ಮತ್ತು ಧರ್ಮಪಾಲರ ಶರಣಾಗತಿಯನ್ನು ಸ್ವೀಕರಿಸಿದ. ದೇವಪಾಲ ತನ್ನ ತಂದೆಯಿಂದ ಬಂದ ರಾಜ್ಯವನ್ನು ವಿಸ್ತರಿಸಿ ಮತ್ತಷ್ಟು ಬಲಗೊಳಿಸಿದ. ಅಸ್ಸಾಂ ಮತ್ತು ಒರಿಸ್ಸಾ, ಹಿಮಾಲಯ ಪರ್ವತಪ್ರದೇಶ, ವಾಯುವ್ಯ ಭಾರತದ ಕೆಲವು ಭಾಗಗಳನ್ನು ಇವನು ಗೆದ್ದು ಆ ಪ್ರಾಂತ್ಯದಲ್ಲಿದ್ದ ಹೂಣರನ್ನು ಸೋಲಿಸಿದ. ದಕ್ಷಿಣದಲ್ಲಿ ಪಾಂಡ್ಯ ಶ್ರೀಮಾರ ಶ್ರೀವಲ್ಲಭನನ್ನು ಸೋಲಿಸಿದನೆಂದು ಹೇಳಲಾಗಿದ್ದರೂ ಅದು ಸಂದೇಹಾಸ್ಪದವಾಗಿದೆ. ದೇವಪಾಲನ ಆಸ್ಥಾನಕ್ಕೆ ಸುಮಾತ್ರದ ಶೈಲೇಂದ್ರ ದೊರೆ ಬಾಲುಪುತ್ರದೇವ ತನ್ನ ದೂತರನ್ನು ಕಳುಹಿಸಿ ನಾಲಂದ ವಿಹಾರಕ್ಕೆ ಕೆಲವು ದತ್ತಿಗಳನ್ನು ದೊರಕಿಸಿಕೊಂಡ. ಈ ಇಬ್ಬರು ಚಕ್ರವರ್ತಿಗಳು ಬೌದ್ಧಧರ್ಮಕ್ಕೆ ಪ್ರೋತ್ಸಾಹ ನೀಡಿ ವಿಕ್ರಮಶಿಲಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ವೃದ್ಧಿಗೊಳಿಸಿದರು. ದೇವಪಾಲನ ತರುವಾಯ ಪಾಲ ವಂಶ ದುರ್ದಶೆಗೆ ಈಡಾಯಿತು. 860ರ ಅನಂತರ ರಾಷ್ಟ್ರಕೂಟರು ಮತ್ತೆ ಬಂಗಾಲದ ಮೇಲೆ ದಾಳಿ ನಡೆಸಿದರು. ಪ್ರತೀಹಾರ ದೊರೆಗಳು ರಾಜ್ಯವನ್ನು ವಿಸ್ತರಿಸಿದರು. ಸಾಮಂತರು ಸ್ವಾತಂತ್ರ್ಯ ಘೋಷಿಸಿಕೊಂಡರು. 908ರ ಸುಮಾರಿಗೆ ನಾರಾಯಣ ಪಾಲನ ಕಾಲದಲ್ಲಿ ಈ ವಂಶ ಸ್ವಲ್ಪ ಚೇತರಿಸಿಕೊಂಡಿತು. ರಾಷ್ಟ್ರಕೂಟ ಇಮ್ಮಡಿ ಕೃಷ್ಣ ಪ್ರತೀಹಾರರನ್ನು ಸೋಲಿಸಿದುದೇ ಇದಕ್ಕೆ ಕಾರಣ. ಕೃಷ್ಣ ಬಂಗಾಲವನ್ನು ಗೆದ್ದರೂ ತನ್ನ ಮೊಮ್ಮಗಳನ್ನು ರಾಜ್ಯಪಾಲನಿಗೆ ವಿವಾಹ ಮಾಡಿದ. 1021ರಲ್ಲಿ 1ನೆಯ ಚೋಳರಾಜೇಂದ್ರ ಈ ಭಾಗವನ್ನು ಗೆದ್ದು 1ನೆಯ ಮಹೀಪಾಲನನ್ನು ಸೋಲಿಸಿದ. 1068ರ ಹಿತ್ತಿಗೆ ವಿಗ್ರಹಪಾಲನನ್ನು ಚಾಳುಕ್ಯ 6ನೆಯ ವಿಕ್ರಮಾದಿತ್ಯ ಸೋಲಿಸಿದ ಮತ್ತೆ ರಾಮಪಾಲ (1077-1120) ಪಾಲವಂಶದ ಸೌಭಾಗ್ಯವನ್ನು ಪುನಶ್ಚೇತನಗೊಳಿಸಿದರೂ 15ರ ಹೊತ್ತಿಗೆ ಪಾಲರು ಅಧಿಕಾರಭ್ರಷ್ಟರಾಗಿ ಸೇನ ವಂಶದವರಿಗೆ ಸ್ಥಳ ಮಾಡಿಕೊಟ್ಟರು. ಪಾಲ ದೊರೆಗಳು ಬೌದ್ಧ ಮತೀಯರಾಗಿದ್ದು ನಾಲಂದ ಮತ್ತು ವಿಕ್ರಮಶೀಲಾ ವಿಶ್ವವಿದ್ಯಾಲಯಗಳನ್ನು ಅಭಿವೃದ್ಧಿಗೊಳಿಸಿದರು. ಪ್ರಸಿದ್ಧ ಬೌದ್ಧ ಪಂಡಿತ ದೀಪಂಕರ ಶ್ರೀ ಜ್ಞಾನ ಅತಿಸ್ಸ 10ನೆಯ ದೊರೆ ನಯಪಾಲನ ಕಾಲದಲ್ಲಿ ವಿಕ್ರಮ ಶಿಲೆಯ ಪ್ರಾಚಾರ್ಯನಾಗಿದ್ದು ಅನಂತರ ಟಿಬೆಟ್ಟಿನ ದೊರೆಯ ಆಮಂತ್ರಣದ ಮೇರೆಗೆ ಅಲ್ಲಿ ಬೌದ್ಧ ಧರ್ಮಪ್ರಸಾರಕ್ಕಾಗಿ ಹೋಗಿ ನೆಲೆಸಿದ. ಪಾಲ ದೊರೆಗಳು ಕಲೆಗೆ ಅಮಿತ ಪ್ರೋತ್ಸಾಹ ನೀಡಿದುದಾಗಿ ತಿಳಿದುಬಂದಿದ್ದರೂ ಆಗಿನ ಕಟ್ಟಡಗಳಾವುವೂ ಉಳಿದುಬಂದಿಲ್ಲ. ಅವರ ಕಾಲದಲ್ಲಿ ನಿರ್ಮಿಸಲಾದ ಹಲವಾರು ಕೆರೆಗಳು ಈಗಲೂ ಉಳಿದುಬಂದಿವೆ.

	ರಾಜೇಂದ್ರಚೋಳ ತನ್ನ ಬಂಗಾಲ ದಿಗ್ವಿಜಯ ಕಾಲದಲ್ಲಿ ವಂಗದೇಶದ ಗೋವಿಂದಚಂದ್ರನನ್ನು ಸೋಲಿಸಿದುದಾಗಿ ಹೇಳಿದೆ. ಈ ಗೋವಿಂದಚಂದ್ರಯಾದವ ವಂಶದವನಾಗಿದ್ದು ಪೂರ್ವ ಬಂಗಾಲದಲ್ಲಿ ಆಳುತ್ತಿದ್ದ. ಈ ವಂಶದ ಮೂಲಪುರುಷನಾದ ವಜ್ರವರ್ಮನ ವಿಷಯ ಬೆಲಾದ ಶಾಸನದಿಂದ ತಿಳಿದುಬರುತ್ತದೆ. ಅವನ ಮಗ ಜಾತವರ್ಮ ಆ ಮನೆತನದ ಪುರೋಭಿವೃದ್ದಿಗೆ ಕಾರಣನಾದ. ಮಹಾರಾಜಾಧಿರಾಜನೆಂಬ ಬಿರುದು ಧರಿಸಿದ್ದ ಚೇದಿ ವಂಶದ ಕರ್ಣ ವಂಗದೇಶವನ್ನು ಗೆದ್ದ ತರುವಾಯ ತನ್ನ ಮಗಳನ್ನು ಅವನಿಗೆ ವಿವಾಹ ಮಾಡಿಕೊಟ್ಟಿದ್ದ. ಅವನು ಅಂಗ ಮತ್ತು ಕಾಮರೂಪಗಳನ್ನು ಗೆದ್ದುಕೊಂಡ. ಅವನ ಮಗ ಹರಿವರ್ಮ 46 ವರ್ಷ ಆಳಿದ ಅನಂತರ 12ನೆಯ ಶತಮಾನದ ಆದಿಭಾಗದಲ್ಲಿ ಅವನ ತಮ್ಮ ಶಾಮಲವರ್ಮ ಸಿಂಹಾಸನಕ್ಕೆ ಬಂದ. ಅವನ ಉತ್ತರಾಧಿಕಾರಿ ಭೋಜವರ್ಮನನ್ನು 12ನೆಯ ಶತಮಾನದ ಮಧ್ಯಭಾಗದಲ್ಲಿ ವಿಜಯಸೇನ ಸೋಲಿಸಿ ತನ್ನ ಸಾರ್ವಭೌಮತ್ವ ಸ್ಥಾಪಿಸಿದ.

	ಸೇನ ವಂಶ 1095ರಿಂದ 1245ರ ವರೆಗೆ ಬಂಗಾಳವನ್ನು ಆಳಿತು. ಈ ವಂಶದ ಮೂಲಪುರುಷ ಕರ್ನಾಟಕದಿಂದ ಬಂದು ರಾಡಾ ಪ್ರದೇಶದಲ್ಲಿ ನೆಲಸಿದ ಸಾಮಂತಸೇನ. ಅವನ ಮಗ ಮಹಾರಾಜಾಧಿರಾಜ ಹೇಮಂತಸೇನ ಅಧಿಕಾರವನ್ನು ಬೆಳೆಸಿದುದಾಗಿ ತಿಳಿದುಬರುತ್ತದೆ. ಅವನ ಮಗ ವಿಜಯಸೇನ 1095ರಲ್ಲಿ ಇಡೀ ಬಂಗಾಲವನ್ನು ವಶಪಡಿಸಿಕೊಂಡುದಲ್ಲದೆ ಪಾಲದೊರೆಗಳನ್ನು ಸೋಲಿಸಿ ಅಧಿಕಾರಚ್ಯುತಗೊಳಿಸಿದವನು. ಮಾಳ್ವ, ಮಿಥಿಲಾ ಮತ್ತು ಕಾಮರೂಪ ದೇಶಗಳ ಮೇಲೆ ಆಕ್ರಮಣ ನಡೆಸಿದ. ದೀರ್ಘ ಆಳ್ವಿಕೆಯ ಅನಂತರ 1158ರಲ್ಲಿ ಅವನ ಮಗ ವಲ್ಲಾಳಸೇನ ಸಿಂಹಾಸನವನ್ನೇರಿದ. ಉತ್ತಮ ಯೋಧ ಮತ್ತು ವಿದ್ಯಾಭಿಮಾನಿಯಾಗಿದ್ದ ಅವನು ಸ್ವತಃ ಎರಡು ಗ್ರಂಥಗಳನ್ನು ರಚಿಸಿ. ಚಾಳುಕ್ಯ 6ನೆಯ ವಿಕ್ರಮಾದಿತ್ಯನ ಮಗಳು ರಾಮದೇವಿಯನ್ನು ಅವನು ವಿವಾಹವಾಗಿದ್ದ. ಮುಪ್ಪಿನಲ್ಲಿ ಮಗ ಲಕ್ಸ್ಮಣ ಸೇನನಿಗೆ ಸಿಂಹಾಸನವನ್ನು ಬಿಟ್ಟುಕೊಟ್ಟು ಪತ್ನಿಯೊಂದಿಗೆ ಧಾರ್ಮಿಕ ಜೀವನದಲ್ಲಿ ತೊಡಗಿದ. 1178ರಲ್ಲಿ ಸಿಂಹಾಸನವನ್ನೇರಿದ ಲಕ್ಷ್ಮಣಸೇನ ಮಹಾಶೂರ ಗಾಹಡವಾಲ ವಂಶದ ಜಯಚಂದ್ರನನ್ನು 1183-1192ರ ನಡುವೆ ಸೋಲಿಸಿ ಪಶ್ಚಿಮದಲ್ಲಿ ತನ್ನ ಅಧಿಕಾರವನ್ನು ಬಲಗೊಳಿಸಿ, ಅನಂತರ ಕಾಮರೂಪ, ಕಾಶಿ, ಕಳಿಂಗ ದೊರೆಗಳನ್ನು ಸೋಲಿಸಿದುದಾಗಿ ಶಾಸನಗಳು ತಿಳಿಸುತ್ತವೆ. ಅದರೆ 1202ರಲ್ಲಿ ಇಕ್ತಿಯಾರುದ್ದೀನ್ ಮಹಮ್ಮದ್ ಖಿಲ್ಚಿಯ ನೇತೃತ್ವದಲ್ಲಿ ಬಂದ ಮುಸ್ಲಿಮರ ಸೈನ್ಯ ಅವನ ರಾಜಧಾನಿ ನದಿಯಾವನ್ನು ಆಕ್ರಮಿಸಿಕೊಂಡಾಗ ಪೂರ್ವ ಬಂಗಾಲಕ್ಕೆ ಅವನು ಹಿಂದೆ ಸರಿದ. ಸರಿದ ಅನಂತರ ಅಲ್ಲೇ ಸ್ವಲ್ಪ ಕಾಲವಿದ್ದು ಮರಣ ಹೊಂದಿದ. ಅವನ ಮಕ್ಕಳಾದ ವಿಶ್ವರೂಪ ಸೇನ ಮತ್ತು ಕೇಶವ ಸೇನರು ಕೆಲಕಾಲ ಆಳಿದರು. 1245ರಲ್ಲಿ ಇಡೀ ಬಂಗಾಲ ಮುಸ್ಲಿಮರ ವಶವಾಯಿತು. ಸೇನರು ಸಂಸ್ಕøತ ಸಾಹಿತ್ಯಕ್ಕೆ ಆಶ್ರಯದಾತರಾಗಿದ್ದರು. ಕವಿ ಜಯದೇವ ಮತ್ತು ನ್ಯಾಯಶಾಸ್ತ್ರ ಪಂಡಿತ ಹಲಾಯುಧ ಇವರ ಆಶ್ರಿತರಾಗಿದ್ದರು. 11ನೆಯ ಶತಮಾನದಿಂದ 13ನೆಯ ಶತಮಾನದವರೆಗೆ ಬ್ರಹ್ಮಪುತ್ರಾ ನದಿಯ ಪೂರ್ವಭಾಗದಲ್ಲಿ ಪಟ್ಟಿಕೇರಾ ಮತ್ತು ದೇವ ಮನೆತನಗಳು ಆಳುತ್ತಿದ್ದುದಾಗಿ ಹೇಳಲಾಗಿದೆ. ಸ್ವಲ್ಪ ಕಾಲ ದೇವ ಮನೆತನದ ಅರಸರು ಸಮತಟ ಮತ್ತು ವಂಗ ಪ್ರದೇಶಗಳನ್ನು ಸೇನರಿಂದ ಕಸಿದುಕೊಂಡಿದ್ದಿರಬಹುದು.

	ಇಕ್ತಿಯಾರುದ್ದೀನ್ ಮಹಮ್ಮದ್ ಖಲ್ಜಿ 1202ರಲ್ಲಿ ಸೇನರಿಂದ ಪಶ್ಚಿಮ ಬಂಗಾಲವನ್ನು ವಶಪಡಿಸಿಕೊಂಡು ದೆಹಲಿಯ ಸುಲ್ತಾನ ಮಹಮದ್ ಘೋರಿಯ ಅಧೀನನಾಗಿ ಬಂಗಾಲದಲ್ಲಿ ಮುಸ್ಲಿಮ್ ಆಳ್ವಿಕೆಯನ್ನು ಆರಂಭಿಸಿದ. 1205ರಲ್ಲಿ ಟಿಬೆಟ್ಟಿನ ಮೇಲೆ ದಾಳಿ ವಿಫಲವಾಯಿತು. 1206ರಲ್ಲಿ ಅವನ ಮರಣವಾಯಿತು. 1245ರ ಸಮಯಕ್ಕೆ ಮುಸ್ಲಿಮರ ಪ್ರಭಾವ ಇಡೀ ಬಂಗಾಲದಲ್ಲಿ ಹರಡಿತು. ಬಂಗಾಲ ದೆಹಲಿ ಸುಲ್ತಾನರ ವಶವಾಯಿತು. ಆದರೂ ಆಗಾಗ್ಗೆ ಬಂಗಾಲದ ಅಧಿಕಾರಿಗಳು ದೆಹಲಿಯ ವಿರುದ್ಧ ಬಂಡೇಳುತ್ತಿದ್ದರು. 1280ರಲ್ಲಿ ತುಘ್ರೀಲನ ನೇತೃತ್ವದಲ್ಲಿ ಎದ್ದ ದಂಗೆಯನ್ನು ಸುಲ್ತಾನ್ ಬಲ್ಬನ್ ನಿಷ್ಕುರುಣೆಯಿಂದ ಮಟ್ಟಹಾಕಿದರೂ ಮತ್ತೆ ಅವನ ಮಗ ಬುಘಾಖಾನ್ ಸ್ವತಂತ್ರವಾಗಿ ನಸೀರುದ್ಧೀನ್ ಎಂಬ ಹೆಸರಿನಲ್ಲಿ ಬಂಗಾಲವನ್ನು ಲಖ್ನಾವತಿಯಿಂದ (ಮಾಲ್ಡಾ ಜಿಲ್ಲೆ) ಆಳತೊಡಗಿದ. ಅವನ ಅನಂತರ 1291ರಲ್ಲಿ ರುಕ್ನದ್ದೀನ್ ಕೈಕಾಉಸ್, 1301ರಲಿ ಷಂಸುದ್ದೀನ್ ಫಿರೂಜ್ ಷಾ ಅಧಿಕಾರಕ್ಕೆ ಬಂದರು. ಫಿರೂಜ್ ತನ್ನ ಅಧಿಕಾರವನ್ನು ವಿಸ್ತರಿಸಿಕೊಂಡು ಇಡೀ ಬಂಗಾಲದಲ್ಲಿ ಪ್ರಬಲನಾದ. ಫಿರೂeóÁಬಾದ್ (ಪಾಂಡುವ) ನಗರವನ್ನು ಸ್ಥಾಪಿಸಿದ. 1322ರಲ್ಲಿ ಫಿರೂಜûನ ಮರಣಾನಂತರ ಘಿಯಾಸುದ್ದೀನ್ ಬಹದ್ದೂರ್ ಷಾ ಅಧಿಕಾರಕ್ಕೆ ಬಂದರೂ 1324ರಲ್ಲಿ ಘಿಯಾಸುದ್ದೀನ್ ತುಗಲಖನ ಬಂದಿಯಾಗಿ ದೆಹಲಿಗೆ ತೆರಳಿ, ಮಹಮದ್ ತುಗಲಖನ ದಯೆಯಿಂದ ತನ್ನ ರಾಜ್ಯಕ್ಕೆ ಹಿಂದಿರುಗಿದ. 1336ರಲ್ಲಿ ಫಕ್ರುದ್ದೀನ್ ಮುಬಾರಕ್ ಷಾ ದಂಗೆಯೆದ್ದು ಬಂಗಾಲವನ್ನು ದೆಹಲಿಯ ಹಿಡಿತದಿಂದ ಮುಕ್ತಗೊಳಿಸಿದ. 1345 ರಿಂದ 1487ರ ವರೆಗೆ ಇಲಿಯಾಸ್ ಷಾಹೀ ಮನೆತನ ಬಂಗಾಲವನ್ನು ಆಳುತ್ತಿತ್ತು. 1357ರವರೆಗೆ ಆಳಿದ ಮೊದಲ ಸುಲ್ತಾನ ಷಂಸುದ್ದೀನ್ ಇಲಿಯಾಸ್ ಷಾ ಪೂರ್ವ ಬಂಗಾಲವನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡನಲ್ಲದೆ ತಿರ್ಹುತ್, ಒರಿಸ್ಸಾ ಮತ್ತು ವಾರಾಣಾಸಿ ಪ್ರದೇಶಗಳಿಂದ ಕಪ್ಪಕಾಣಿಕೆಗಳನ್ನು ಪಡೆಯುತ್ತಿದ್ದ. ಇವನು ಫಿರೋಜ್ ಷಾ ತುಗಲಖನ ವಿರುದ್ಧ ಹೋರಾಡಿ ತನ್ನ ಸ್ವಾತಂತ್ರ್ಯವನ್ನುಳಿಸಿಕೊಂಡ (1353). ಇಲಿಯಾಸ್ ಷಾನ ಮಗ ಸಿಕಂದರ್ ಷಾನ (1357-1391) ಕಾಲದಲ್ಲಿ ಮತ್ತೆ ಫಿರೂಜ್ ಷಾ ತುಗಲಖನ ದಾಳಿಗೆ ಬಂಗಾಲ ತುತ್ತಾದರೂ (1359), ತನ್ನ ಸ್ವಾತಂತ್ರ್ಯವನ್ನುಳಿಸಿಕೊಂಡಿತು. ಅವನು 1368ರಲ್ಲಿ ಅದೀನ ಎಂಬಲ್ಲಿ ಕಟ್ಟಿಸಿದ ಮಸೀದಿ ಉತ್ತಮ ವಾಸ್ತು ನಿರ್ಮಾಣ. ಅವನ ಉತ್ತರಾಧಿಕಾರಿ ಘಿಯಾಸುದ್ದೀನ್ ಅಜಮಾ ಷಾ (1391-1410). ಅನಂತರ ಬಹುಶಃ 1415ರ ಸುಮಾರಿನಲ್ಲಿ ರಾಜಾ ಗಣೇಶನೆಂಬ ಹಿಂದು ಅಧಿಕಾರಿ ಸಿಂಹಾಸನವನ್ನು ವಶಪಡಿಸಿಕೊಂಡು, ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದ್ದ ತನ್ನ ಮಗ ಜೂಲುದ್ದೀನನ್ನು (1415-31) ಪಟ್ಟಕ್ಕೇರಿಸಿದ. ಮತ್ತೆ 1437ರಲ್ಲಿ ಇಲಿಯಾಸ್ ಷಾ ಮನೆತನದ ನಸಿರುದ್ದೀನ್ ಮಹಮ್ಮದ್ ಷಾ (1437-59) ಅಧಿಕಾರ ಕಸಿದುಕೊಂಡ. 1487ರವರೆಗೆ ಆ ಮನೆತನ ಆಧಿಕಾರದಲ್ಲಿತ್ತು. ತರುವಾಯ ಆರು ವರ್ಷ ಕಾಲ ಅಬಿಸಿನಿಯನ್ ಮೂಲದವರು ಆಳಿದರು. ಅನಂತರ 1493ರಲ್ಲಿ ಸಯ್ಯಿದ್ ಮನೆತನದ ಅಲ್ಲಾವುದ್ದೀನ್ ಹುಸೇನ್ ಷಾ (1497-1519) ಪದವಿಗೆ ಬಂದ. 1538ರ ವರೆಗೆ ಆ ಮನೆತನ ಆಳಿತು. ತನ್ನ 26 ವರ್ಷಗಳ ಅಳ್ವಿಕೆಯಲ್ಲಿ ಹುಸೇನ್ ಷಾ ಬಂಗಾಲದ ಸಂಪತ್ತನ್ನು ಅಭಿವೃದ್ಧಿಗೊಳಿಸಿದನಲ್ಲದೆ ದೆಹಲಿಯ ಸುಲ್ತಾನನಿಗೆ ಸಿಂಹಸ್ವಪ್ನನಾಗಿದ್ದ. ಪೂರ್ವದಲ್ಲಿ ಅಸ್ಸಾಂ, ಆರಕಾನ್‍ಗಳಲ್ಲಿ ಅವನ ಪ್ರಭಾವವಿತ್ತು. ಅವನು ಬಂಗಾಲಿ ಸಾಹಿತ್ಯವನ್ನು ಪ್ರೋತ್ಸಾಹಿಸಿದನಲ್ಲದೆ ವೈಷ್ಣವ ಸಂತ ಚೈತನ್ಯರ ಧರ್ಮಪ್ರಸಾರಕ್ಕೆ ನೆರವು ನೀಡಿದ. ಮಧ್ಯಯುಗದ ಬಂಗಾಲದ ಇತಿಹಾಸದಲ್ಲಿ ಅವನ ಕಾಲ ಭವ್ಯವಾದ್ದು. ಅವನ ಉತ್ತರಾಧಿಕಾರಿ ನಸ್ರತ್ ಷಾ. ಈತ ಬಾಬರನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡ. ಈ ಕಾಲದಲ್ಲಿ ಬೃಹತ್ ಸ್ವರ್ಣ ಮಸೀದಿಯ ನಿರ್ಮಾಣವಾಯಿತು. 1538ರಲ್ಲಿ ಮೊಗಲ್ ಚಕ್ರವರ್ತಿ ಹುಮಾಯೂನ್ ಬಂಗಾಲವನ್ನು ಗೆದ್ದುಕೊಂಡರೂ ಮರುವರ್ಷ ಇಡೀ ಸಾಮ್ರಾಜ್ಯ ಸೂರ್ ವಂಶದ ಷೇರ್‍ಷಹನ ವಶವಾಗಿ 1564ರವರೆಗೂ ಅವನ ವಂಶಸ್ಥರ ವಶದಲ್ಲಿತ್ತು. ಬಂಗಾಲದಲ್ಲಿ 1564ರಲ್ಲಿ ಆಡಳಿತ ಸ್ಥಾಪಿಸಿದ ಸುಲೇಮಾನ್ ಕರ್ನಾನಿ ಹೆಸರಿಗೆ ಮೊಗಲರ ಅಧೀನನಾಗಿದ್ದ. ಅವನ ಮಗ ವಾವೂದ್ 1572ರಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅಕ್ಬರನ ಅಧಿಕಾರವನ್ನು ಧಿಕ್ಕರಿಸಿ ಹೋರಾಡುತ್ತ 1576ರಲ್ಲಿ ಸತ್ತ. ಅನಂತರ ಬಂಗಾಲ ಮೊಗಲ್ ಸಾಮ್ರಾಜ್ಯದಲ್ಲಿ ಲೀನವಾಯಿತು. ಮೊಗಲರ ಕಾಲದಲ್ಲಿ ಬಂಗಾಲ ಶಾಂತಿ ಸುವ್ಯವಸ್ಥೆಗಳಿಂದ ಬಹುಮುಖ ಪ್ರಗತಿ ಸಾಧಿಸಿತು. ವ್ಯಾಪಾರ ವಾಣಿಜ್ಯಗಳಲ್ಲಿ ಪ್ರಗತಿ ಹೊಂದಿ ಸಂಪದ್ಭರಿತವಾಯಿತು. ಯೂರೋಪಿನ ವರ್ತಕರು ಬರಲಾರಂಭಿಸಿದರು. ಮೊದಲು ಬಂದ ಪೋರ್ಚುಗೀಸರು ಸಮುದ್ರ ದರೋಡೆ ಮತ್ತು ಗುಲಾಮೀ ವ್ಯಾಪಾರದಲ್ಲಿ ನಿರತರಾದುದರಿಂದ 1632ರಲ್ಲಿ ಮೊಗಲ್ ದಳಪತಿ ಕಾಸಿಮ್ ಅಲಿ ಖಾನ್ ಅವರನ್ನು ಸದೆಬಡಿದ. ತರುವಾಯ ಬಂದ ಡಚ್ ಡೇನ್, ಫ್ರೆಂಚ್ ಮತ್ತು ಆಂಗ್ಲ ವರ್ತಕರು ಅನುಕ್ರಮವಾಗಿ ಚಿನ್‍ಸುರಾ, ಶ್ರೀರಾಮ್‍ಪುರ, ಚಂದ್ರನಾಗೂರ್ ಮತ್ತು ಕಲ್ಕತ್ತಗಳಲ್ಲಿ ತಮ್ಮ ವ್ಯಾಪಾರ ಕೋಠಿಗಳನ್ನು ಸ್ಥಾಪಿಸಿದರು. ಮೊಗಲ್ ಸಾಮ್ರಾಜ್ಯ ಬಲಶಾಲಿಯಾಗಿದ್ದವರೆಗೂ ಈ ವಿದೇಶಿ ವರ್ತಕರು ವ್ಯಾಪಾರಸ್ಥರಾಗಿಯೇ ಉಳಿದರು. ದೇಶದ ಆರ್ಥಿಕ, ಸಾಮಾಜಿಕ ಸುಭದ್ರತೆಗಳು ಸಮರ್ಪಕವಾಗಿದ್ದುವು. 18ನೆಯ ಶತಮಾನದ ಪೂರ್ವಾರ್ಧದಲ್ಲಿ ಪ್ರಾಂತ್ಯಾಧಿಕಾರಿಗಳಾದ ಮುರ್ಷಿದ್ ಕುಲಿ ಖಾನ್ ಮತ್ತು ಷೂಜಾಉದ್ದೀನರು ಅನುಕ್ರಮವಾಗಿ ಬಿಹಾರ ಮತ್ತು ಒರಿಸ್ಸಾಗಳನ್ನು ಬಂಗಾಲ ಪ್ರಾಂತ್ಯಕ್ಕೆ ಸೇರಿಸಿದರು. ಷೂಜನ ಮಗ ಸರ್ಫ್‍ರಾಜ್ ಖಾನ್ ಅಸಮರ್ಥನಾಗಿದ್ದುದರಿಂದ 1740ರಲ್ಲಿ ಬಿಹಾರದ ಸಾಮಂತ ಅಲಿವರ್ದಿ ಖಾನ್ (1740-56) ಅಧಿಕಾರ ಕಸಿದುಕೊಂಡ. ಆ ವೇಳೇಗೆ ನಾದಿರ್‍ಷಾನ ಧಾಳಿಯಿಂದ ಮೊಗಲ್ ಸಾಮ್ರಾಜ್ಯ ಅಸ್ತವ್ಯಸ್ತವಾಗಿತ್ತು. ಹೆಚ್ಚು ಕಡಿಮೆ ಸ್ವತಂತ್ರನಾಗಿ ಆಳಿದ ಅಲಿವರ್ದಿ ಉತ್ತಮಯೋಧ ಮತ್ತು ಆಡಳಿತಗಾರ. ವಿದೇಶಿ ವ್ಯಾಪಾರಸ್ಥರನ್ನು ಹಿಡಿತದಲ್ಲಿಟ್ಟುಕೊಂಡಿದ್ದ. ಪರಸ್ಪರ ಪೈಪೋಟಿಗೆ ಅವನು ಅವಕಾಶ ನೀಡಲಿಲ್ಲ. ಆತ 1751ರಲ್ಲಿ ಮರಾಠರೊಂದಿಗೆ ಒಪ್ಪಂದ ಮಾಡಿಕೊಂಡು ಅವರಿಗೆ ಒರಿಸ್ಸಾದ ಕೆಲವು ಪ್ರದೇಶಗಳನ್ನೂ ಕಪ್ಪಕಾಣಿಕೆಗಳನ್ನೂ ಒಪ್ಪಿಸಬೇಕಾಯಿತು. 1756ರಲ್ಲಿ ಅವನು ಸತ್ತಾಗ ಅವನ ಮಗಳ ಮಗ ಸಿರಾಜುದ್ದೌಲ (1756-57) ನವಾಬನಾದ. ಈತ ಅಶಕ್ತನೂ ಅಪ್ರಾಪ್ತವಯಸ್ಕನೂ ಆಗಿದ್ದುದರಿಂದ ಸ್ವಾರ್ಥಪರ ಅಧಿಕಾರಿಗಳ ಕೈವಶವಾದ. ಇವನು ಹೇಡಿಯಲ್ಲದಿದ್ದರೂ ಚಂಚಲನಾಗಿದ್ದು ಜೀವನದ ಹೋರಾಟದಲ್ಲಿ ಸೋತ. ಕಲ್ಕತ್ತದ ಇಂಗ್ಲಿಷರು ಅಪರಾಧಿಯಾದ ಕೃಷ್ಣದಾಸನಿಗೆ ಇವನ ಒಪ್ಪಿಗೆಯಿಲ್ಲದೆ ಆಶ್ರಯ ನೀಡಿದ್ದರಿಂದ ಅವರ ಕೋಠಿಯನ್ನು ಗೆದ್ದುಕೊಂಡ. ಅದರೆ ದುರದೃಷ್ಟಕರವಾದ ಕಲ್ಕತ್ತ ಕತ್ತಲುಕೋಣೆಯ ಘಟನೆ ನಡೆಯಿತು. ಅದಕ್ಕಾಗಿ ಸೇಡು ತೀರಿಸಿಕೊಳ್ಳಲು ಇಂಗ್ಲಿಷರು ಕ್ಲೈವ್ ಮತ್ತು ವ್ಯಾಟ್ಸನ್ನರ ನೇತೃತ್ವದಲ್ಲಿ ಜನವರಿ 1757ರಲ್ಲಿ ಕಲ್ಕತ್ತವನ್ನು ವಶಪಡಿಸಿಕೊಂಡರು. ಅವರು ಮಾರ್ಚ್‍ಲ್ಲಿ ಚಂದ್ರನಾಗೂರನ್ನು ಫ್ರೆಂಚರಿಂದ ವಶಪಡಿಸಿಕೊಂಡಾಗ ಸಿರಾಜ್ ಅಸಹಾಯಕನಾಗಿ ನೋಡುತ್ತಿದ್ದ. ಜೂನ್ 23ರಂದು ಪ್ಲಾಸಿಯಲ್ಲಿ ನಡೆದ ಕದನದಲ್ಲಿ ಇಂಗ್ಲಿಷರು ಸಿರಾಜನನ್ನು ಸೋಲಿಸಿ ಅವನ ಶಿರಚ್ಛೇದ ಮಾಡಿದರು. ಪಿತೂರಿಕೋರನಾದ ಮೀರ್ ಜಾಫರ್ ಜೂನ್ 28ರಂದು ಬಂಗಾಲದ ನವಾಬನಾದ (1757-1760) ಮತ್ತು 1763-1765 ಇಂಗ್ಲಿಷರಿಗೆ ಹೇರಳ ಸಂಪತ್ತನ್ನು ಕೊಟ್ಟು ನಿರ್ಗತಿಕ ಸ್ಥಿತಿಯಲ್ಲಿದ್ದ ಮೀರ್ ಜಾಫರ್ ಡಚ್ಚರೊಂದಿಗೆ ಪಿತೂರಿಯಲ್ಲಿ ತೊಡಗಿದ್ದಾಗ ಇಂಗ್ಲಿಷರು ಅವನನ್ನು ಸಿಂಹಾಸನದಿಂದ ದೂಡಿ ಅವನ ಅಳಿಯ ಮೀರ್ ಕಾಸಿಮನನ್ನು ಅಧಿಕಾರಕ್ಕೆ ತಂದರು. (1760-1763). ಮೂರು ವರ್ಷಗಳ ಅನಂತರ ಅವನು ಇಂಗ್ಲಿಷರೊಂದಿಗೆ ದ್ವೇಷಗಳಿಸಿ ತನ್ನ ರಾಜ್ಯವನ್ನು ತ್ಯಜಿಸಿ ಅಯೋಧ್ಯೆಯ ನವಾಬನ ರಕ್ಷಣೆಗೆ ಓಡಿಹೋದ. ಅವನು ಮತ್ತೆ ಬರಲಿಲ್ಲ. ಮತ್ತೆ ಮೀರ್ ಜಾಫರ್ ಅಧಿಕಾರಕ್ಕೆ ಬಂದು 1765ರಲ್ಲಿ ಮರಣ ಹೊಂದಿದ. ಆಗ ಮೊಗಲ್ ಚಕ್ರವರ್ತಿ 2ನೆಯ ಷಾ ಅಲಮನಿಂದ ಇಂಗ್ಲಿಷರು ಬಂಗಾಲ, ಬಿಹಾರ್ ಮತ್ತು ಒರಿಸ್ಸಾ ಪ್ರದೇಶಗಳ ದಿವಾನಿ ಹಕ್ಕನ್ನು ಪಡೆದುಕೊಂಡರು. ರಾಬರ್ಟ್ ಕ್ಲೈವ್ ಬಂಗಾಲದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಗವರ್ನರನಾದ. (1765-67) ಹೆಸರಿಗೆ ಬಂಗಾಲಕ್ಕೊಬ್ಬ ಮುಸ್ಲಿಮ್ ಅಧಿಕಾರಿಯಿದ್ದರೂ ಆತ ಇಂಗ್ಲಿಷರ ಕೈಗೊಂಬೆಯಾಗಿದ್ದ. ರಾಜ್ಯದಲ್ಲಿ ದುರಾಡಳಿತದ ದೆಸೆಯಿಂದ ಪ್ರಜೆಗಳು ದಿಕ್ಕು ಕಾಣದಾಗಿದ್ದರು. 1770ರಲ್ಲಿ ಸಂಭವಿಸಿದ ಕ್ಷಾಮದಿಂದ ರಾಜ್ಯದ ಮೂರನೆಯ ಒಂದು ಭಾಗದಷ್ಟು ಜನ ಸತ್ತರು. 1772ರಲ್ಲಿ ವಾರನ್ ಹೇಸ್ಟಿಂಗ್ಸ್ ಕಂಪನಿಯ ಗವರ್ನರಾಗಿ ನೇಮಕಗೊಂಡ. 1773ರಲ್ಲಿ ರೆಗ್ಯುಲೇಟಿಂಗ್ ಆಕ್ಟ್ ಜಾರಿಗೆ ಬಂದ ಅನಂತರ ವಾರನ್ ಹೇಸ್ಟಿಂಗ್ಸ್ ಗವರ್ನರ್-ಜನರಲ್ ಅಗಿ ನೇಮಕಗೊಂಡು ಬ್ರಿಟಿಷ್ ಭಾರತದ ಎಲ್ಲ ಪ್ರದೇಶಗಳಿಗೂ ಅಧಿಪತಿಯಾದ. ಕಲ್ಕತ್ತ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ರಾಜಧಾನಿಯಾಯಿತು.

	ಅರ್ವಾಚೀನ ಕಾಲದಲ್ಲಿ ಆಡಳಿತ ದೃಷ್ಟಿಯಿಂದ ಬಂಗಾಲದಲ್ಲಿ ಅನೇಕ ಬದಲಾವಣೆಗಳಾದವು. 1773ರಿಂದ ಗವರ್ನರ್-ಜನರಲ್‍ನ ನೇರ ಆಡಳಿತದಲ್ಲಿದ್ದ ಬಂಗಾಲ 1854ರಲ್ಲಿ ಲೆಫ್ಟನೆಂಟ್‍ನ ಗವರ್ನರನ ಆಡಳಿತಕ್ಕೊಳಗಾಯಿತು. 1905ರಲ್ಲಿ ಕರ್ಜನನ ಕಾಲದಲ್ಲಿ ಬಂಗಾಲದ ವಿಭಜನೆಯಾದಾಗ ಜನತೆ ಅದನ್ನು ಸುರೇಂದ್ರನಾಥ ಬ್ಯಾನರ್ಜಿಯವರ ನೇತೃತ್ವದಲ್ಲಿ ವಿರೋಧಿಸಿ ಉಗ್ರ ಚಳುವಳಿಯನ್ನಾರಂಭಿಸಿತು. ಸ್ವದೇಶಿ ಚಳುವಳಿ ಅರಂಭವಾಯಿತು. ಬ್ರಿಟಿಷ್ ವಸ್ತುಗಳು ಬಹಿಷ್ಕಾರಕ್ಕೆ ಒಳಗಾದುವು. ಬ್ರಿಟಿಷರು ಚಳುವಳಿಯನ್ನು ಹತ್ತಿಕ್ಕಲು ಮಾಡಿದ ಪ್ರಯತ್ನದಿಂದ ಅರವಿಂದ ಘೋಷರ ನೇತೃತ್ವದಲ್ಲಿ ಭೂಗತ ದೌರ್ಜನ್ಯಕಾರಿ ಚಟುವಟಿಕೆ ಬೆಳೆಯಿತು. ವಿರೋಧಿ ಚಳವಳಿಯನ್ನು ಬ್ರಿಟಿಷ್ ಪ್ರಭುತ್ವ ತಡೆಯಲಾರದೆ 1911ರಲ್ಲಿ ಬಂಗಾಲದ ವಿಭಜನೆಯನ್ನು ಕೊನೆಗೊಳಿಸಿತು. ಇಡೀ ಬಂಗಾಲ ಒಂದಾಗಿ ಮತ್ತೆ ಗವರ್ನರನ ಆಡಳಿತಕ್ಕೊಳಗಾಯಿತು. 1947ರಲ್ಲಿ ಭಾರತದ ಸ್ವಾತಂತ್ರ್ಯಕ್ಕೆ ಬೆಲೆಯಾಗಿ ಬಂಗಾಲವನ್ನು ಮತ್ತೆ ವಿಭಜಿಸಿ ಅದರ 3/1 ಭಾಗವನ್ನು (ಪಶ್ಚಿಮ ಬಂಗಾಲ) ಭಾರತ ಒಕ್ಕೂಟಕ್ಕೂ, 3/2 ಭಾಗವನ್ನು (ಪೂರ್ವ ಬಂಗಾಲ) ಪಾಕಿಸ್ತಾನಕ್ಕೂ ಸೇರಿಸಲಾಯಿತು. ಪಾಕಿಸ್ತಾನಕ್ಕೆ ಸೇರಿದ ಪೂರ್ವಬಂಗಾಲ 1971ರಲ್ಲಿ ಪಾಕಿಸ್ತಾನದಿಂದ ಬೇರ್ಪಟ್ಟು ಸ್ವತಂತ್ರ ಬಾಂಗ್ಲಾ ದೇಶವಾಯಿತು.

	ಮೂರ್ತಿ ಶಿಲ್ಪ: ಬಂಗಾಲ ಪ್ರದೇಶದಲ್ಲಿ ಮೌರ್ಯ ಪೂರ್ವ ಅಥವಾ ಮೌರ್ಯ ಶಿಲ್ಪಗಳಾವುವೂ ಈವರೆಗೆ ದೊರಕಿಲ್ಲ. ಮಹಾಸ್ತಾನದಲ್ಲಿ ದೊರಕಿರುವ ಸುಟ್ಟ ಮಣ್ಣಿನ ಗೊಂಬೆಗಳು ಕುಷಾಣರ ಪೂರ್ವಕಾಲಕ್ಕೆ ಸೇರುತ್ತವೆ. ಬರಿಗೈಯಿಂದ ರೂಪಿಸಿದ ಅಥವಾ ಅಚ್ಚುಗಳಲ್ಲಿ ಎರಕ ಹೊಯ್ದು ತಯಾರಿಸಿದ ಆ ಗೊಂಬೆಗಳಲ್ಲಿ ಕಲಾವೈಶಿಷ್ಟ್ಯವೇನೂ ಕಾಣಬರುವುದಿಲ್ಲ. ಕುಮಾರಪುರ ಮತ್ತು ನಿಯಾಮತ್‍ಪುರಗಳಲ್ಲಿ ಸಿಕ್ಕಿರುವ ಕಲ್ಲಿನ ಎರಡು ಸೂರ್ಯಶಿಲ್ಪಗಳು, ಹಂಕ್ರೈಲಿನ ವಿಷ್ಣು ಮತ್ತು ದಿನಾಜ್ ಪುರದ ದೊಡ್ಡ ಗಾತ್ರದ ಮಾನವ ತಲೆ ಗಮನಾರ್ಹವಾದವು. ಸೌಂದರ್ಯ ದೃಷ್ಟಿಯಿಂದ ವಿಶೇಷವಿಲ್ಲದಿದ್ದರೂ ಉಡುಪಿನ ನಿರೂಪಣೆ ಮತ್ತು ಶೈಲಿಯ ದೃಷ್ಟಿಯಿಂದ ಅವನ್ನು ಕುಷಾಣ ಕಾಲಕ್ಕೆ ನಿರ್ದೇಶಿಸಬಹುದೆಂದು ಎಸ್. ಕೆ. ಸರಸ್ವತಿ ಅಭಿಪ್ರಾಯ ಪಟ್ಟಿದ್ದಾರೆ. ಕುಮಾರಪುರದಲ್ಲಿ ಪೀಠದ ಮೇಲೆ ಕೆತ್ತಿರುವ ಏಳು ಕುದುರೆಗಳ ರಥದಲ್ಲಿ ಇಬ್ಬರು ಸೇವಕರ ಮಧ್ಯೆ ಎರಡು ಕೈಗಳಲ್ಲಿ ಕಮಲಪುಷ್ಪಗಳನ್ನು ಹಿಡಿದು ಸೂರ್ಯ ನಿಂತಿದ್ದಾನೆ. ಮೊಳಕಾಲಿನವರೆಗೆ ಉದ್ದ ಅಂಗಿಯನ್ನು ತೊಟ್ಟ ವಿಶಾಲ ದೇಹದ ದುಂಡು ಕಣ್ಣುಗಳ ಸೂರ್ಯನ ತಲೆಯ ಮೇಲೆ ಕಿರೀಟವಿದೆ. ನಿಯಾಮತ್‍ಪುರದ ಶಿಲ್ಪದಲ್ಲಿ ಕುದುರೆ ಮತ್ತು ರಥಗಳಿಲ್ಲದಿದ್ದರೂ ಉಳಿದಂತೆ ಅದು ಕುಮಾರಪುರದ ಶಿಲ್ಪವನ್ನು ಹೋಲುತ್ತದೆ. ಅಂಗಿಯ ಮೇಲೆ ಸೊಂಟಪಟ್ಟಿಯನ್ನು ಕಟ್ಟಿದಂತೆ ತೋರಿಸಲಾಗಿದೆ. ಹಂಕ್ರೈಲಿನ ವಿಷ್ಣುವಿಗೆ ನಾಲ್ಕು ಕೈಗಳಿವೆ. ಎರಡು ಕೈಗಳು ಮುರಿದಿವೆ. ಮೇಲಿನ ಎಡಗೈಯಲ್ಲಿ ಶಂಖ ಮತ್ತು ಬಲಗೈಯಲ್ಲಿ ಪದ್ಮ, ತಲೆಯ ಮೇಲೆ ಮುಕುಟ ಇವೆ. ನಡುವಿಗೆ ಧೋತ್ರವನ್ನುಡಿಸಲಾಗಿದೆ. 

	ಗುಪ್ತರ ಕಾಲದ ಬಂಗಾಲದ ಶಿಲ್ಪಗಳ ಪೈಕಿ ರಾಜಷಾಹಿ ಜಿಲ್ಲೆಯ ಬಿಹರೈಲಿನ ನಿಂತ ಬುದ್ಧನ ಶಿಲ್ಪಕ್ಕೆ ಅಗ್ರಸ್ಥಾನ ದೊರಕಬೇಕು. 5ನೆಯ ಶತಮಾನದ ಆದಿಭಾಗದ ಚುನಾರ್ ಮರಳ್ಗಲ್ಲಿನ ಈ ಶಿಲ್ಪದ ಪಾದಗಳು, ಬಲಗೈ ಮತ್ತು ಎಡಹಸ್ತ ಮುರಿದಿವೆ. ಎಡಗಾಲಿನ ಮೇಲೆ ಭಾರ ಊರಿ ನಿಂತ ರಮ್ಯವಾದ ಈ ಮೂರ್ತಿಯ ಮುಖದಲ್ಲಿ ದೈವೀಲಾಸ್ಯ ಎದ್ದು ಕಾಣುತ್ತದೆ. ಧ್ಯಾನಮಗ್ನ ಕಣ್ಣುಗಳು, ತಲೆಯುಡಿಗೆ ಇವು ಅದರ ಗಾಂಭೀರ್ಯವನ್ನು ಹೆಚ್ಚಿಸುತ್ತವೆ. ಸುಲ್ತಾನ್‍ಗಂಜಿನ ದೊಡ್ಡ ತಾಮ್ರದ ಬುದ್ಧ ಮೂರ್ತಿ ಬಿಹರೈಲಿನ ಬುದ್ಧನಷ್ಟು ಸುಂದರವಾಗಿಲ್ಲ. ಆದರೂ ಅದರ ಭಾವಪೂರ್ಣ ಸಂವೇದನೆ ಗಮನಾರ್ಹ. ಬೋಗ್ರಾ ಜಿಲ್ಲೆಯ ದೇವೋರಾದ ಸೂರ್ಯವಿಗ್ರಹ ಬಂಗಾಲಿ ಶೈಲಿಯ ಭಾವಾವೇಶದ ಪ್ರತೀಕವಾಗಿದೆ. ದುಂಡನೆಯ ಪ್ರಭಾವಮಂಡಲ, ಎರಡು ಕೈಗಳಲ್ಲಿ ಕಮಲ ಪುಷ್ಪಗಳು, ಇಬ್ಬದಿಯಲ್ಲಿ ದಂಡಿ ಮತ್ತು ಪಿಂಗಳ, ಉಷಾ ಮತ್ತು ಪ್ರತ್ಯುಷಾ-ಇವರಿಂದ ಆವೃತನಾದ ಸೂರ್ಯನಿಗೆ ತಲೆಯ ಮೇಲೆ ಕಿರೀಟ, ಕಂಠಹಾರ, ಕೈ ಕಡಗಳು ಮತ್ತು ಪಾದರಕ್ಷೆಗಳಿವೆ. ಅರುಣನ ಸಾರಥ್ಯದಲ್ಲಿ ಧಾವಿಸುತ್ತಿರುವ ಸಪ್ತಾಶ್ವಗಳು ಪೀಠದ ಮೇಲಿದೆ. ಈ ಶಿಲ್ಪ ಮತ್ಸ್ಯಪುರಾಣದ ವರ್ಣನೆಗೆ ಅನುಸಾರವಾಗಿದೆ. ಇದು 6ನೆಯ ಶತಮಾನಕ್ಕೆ ಸೇರುತ್ತದೆ. ಮಹಾಸ್ತಾನದ ಚಿನ್ನದ ಗಿಲೀಟಿರುವ ಕಂಚಿನ ಮಂಜುಶ್ರೀಯ ಬಲಗೈ ವರದ ಮುದ್ರೆಯಲ್ಲೂ ಎಡಗೈ ತರ್ಕಮುದ್ರೆಯಲ್ಲೂ ಇವೆ. ಧೋತ್ರ, ನಡುಪಟ್ಟಿ, ಉತ್ತರೀಯ, ಯಜ್ಞೋಪವೀತ, ಕರ್ಣಕುಂಡಲಗಳು ಮತ್ತು ಬೆಳ್ಳಿಯ ಕಣ್ಣುಗಳು ಈ ಶಿಲ್ಪದ ಅಲಂಕರಣಗಳು; ಮೂರ್ತಿ ಭಾವಪೂರ್ಣವಾಗಿದೆ. ಸರಳ ಸುಂದರವಾದ ಈ ಶಿಲ್ಪ ಗುಪ್ತಶೈಲಿಯ 6ನೆಯ ಶತಮಾನದ ಕೃತಿ. ಇದು ಚಿನ್ನದ ಗಿಲೀಟಿನ ಕಂಚಿನ ವಿಗ್ರಹಶೈಲಿಯ ಮೊದಲನೆಯ ನಿದರ್ಶನ; ಇದು ನೇಪಾಲ, ಟಿಬೆಟ್ ಮತ್ತು ಪೂರ್ವ ಭಾರತಗಳಲ್ಲಿ ಅನಂತರದ ಕಾಲದಲ್ಲಿ ಸಾಮಾನ್ಯವಾಗುತ್ತದೆ. ಚುದ್ದ ಗ್ರಾಮದ ರಾಣಿ ಪ್ರಭಾವತಿ ಮಾಡಿಸಿದ ಎಂಟು ಕೈಗಳ ಸರ್ವಾಣಿ ಮತ್ತು ಕಲ್ಕತ್ತೆಯ ಒಂದು ವಸ್ತು ಸಂಗ್ರಹಾಲಯದಲ್ಲಿರುವ ಶಿವ ಈ ಎರಡು ಕಂಚಿನ ವಿಗ್ರಹಗಳು ಗುಪ್ತಶೈಲಿಗೆ ಸೇರಿದವು.

	ರಾಜಷಾಹಿ ಜಿಲ್ಲೆಯ ಪಹಾಡ್‍ಪುರದಲ್ಲಿ ಅಧಿಕಸಂಖ್ಯೆಯ ಶಿಲ್ಪಕೃತಿಗಳು ಸಿಕ್ಕಿವೆ. ಬಂಗಾಲದ ಶಿಲ್ಪಕಲೆಯ ಇತಿಹಾಸದ ಮೇಲೆ ಇವು ಹೆಚ್ಚಿನ ಬೆಳಕು ಬೀರುತ್ತವೆ. ಗುಪ್ತರ ಕಾಲದ ಶಿಲ್ಪ ಶೈಲಿಯಿಂದ ಪ್ರತ್ಯೇಕವಾಗಿ ಮತ್ತು ಪಾಲ-ಸೇನರ ಕಲೆಯ ಮುನ್ಸೂಚಿಯಂತಿರುವ ಸತ್ತ್ವಶಾಲಿ ಶಿಲ್ಪಗಳನ್ನು ಇಲ್ಲಿ ಕಾಣಬಹುದು. ಗುಪ್ತಶೈಲಿಯಿಂದ ಪ್ರೇರಿತವಾಗಿದ್ದರೂ ಪೌರಸ್ತ್ಯ ಪರಂಪರೆಯನ್ನು ಪ್ರತಿಬಿಂಬಿಸುವ ಈ ಶೈಲಿ ಮುಂದೆ ಪಾಲರ ಶಿಲ್ಪಕಲೆಗೆ ತಳಹದಿಯಾಯಿತು. ಪಹಾಡ್‍ಪುರದ ಎಲ್ಲ ಶಿಲ್ಪಗಳೂ ಒಂದೇ ಶೈಲಿಯವಲ್ಲ. ಮೊದಲನೆಯ ಗುಂಪಿನ ರಾಧಕೃಷ್ಣ ಶಿಲ್ಪ ಕೃಶಾಂಗವುಳ್ಳದ್ದೂ ಲಾಲಿತ್ಯಪೂರ್ಣವೂ ಆಗಿದೆ. ರಾಧೆಯ ದೇಹಭಾವದಲ್ಲಿ ಸ್ತ್ರೀಸೌಂದರ್ಯ ಪ್ರಧಾನವಾಗಿದೆ. ಇದರಲ್ಲಿ ಗುಪ್ತ ಶಿಲ್ಪ ಛಾಯೆ ಇದೆ. ಅದರ ಯಮುನೆಯ ಶಿಲ್ಪದಲ್ಲಿ ಸ್ವಲ್ಪ ಮಾರ್ಪಾಟು ಕಾಣುತ್ತದೆ. ಎರಡನೆಯ ಗುಂಪಿನ ಶಿಲ್ಪಕೃತಿಗಳಲ್ಲಿ ದೇಹಗಳು ಭಾರವಾಗಿಯೂ ಸಡಿಲವಾಗಿಯೂ ಉಬ್ಬಿದಂತೆಯೂ ಪೆಡಸಾಗಿಯೂ ಇವೆ. ಈ ಗುಂಪಿನ ಶಿಲ್ಪಕೃತಿಗಳಿಗೆ ಇಂದ್ರ ಮತ್ತು ಬ್ರಹಸ್ಪತಿಯ ಮೂರ್ತಿಗಳು ನಿದರ್ಶನ. ಮೂರನೆಯ ಗುಂಪಿನ ಮೂರ್ತಿಗಳಲ್ಲಿ ದೇಹ ಬಹಳ ಭಾರವಾಗಿದೆ. ಅಂಗಾಂಗಗಳು ಶಲಾಕೆಗಳಂತೆ ಪೆಡಸಾಗಿವೆ. ನಿರೂಪಣೆ ಬಹಳ ಒರಟಾಗಿರುತ್ತದೆ. ವಾಲಿ ಸುಗ್ರೀವರ ಕಾಳಗ, ಸಂಜೀವಿನಿ ಬೆಟ್ಟವನ್ನು ಹೊತ್ತ ಹನುಮಾನ್ ಇವು ಈ ಗುಂಪಿನ ವಿಗ್ರಹಗಳಿಗೆ ಉತ್ತಮ ನಿದರ್ಶನಗಳು.

	ಪಾಲ-ಸೇನರ ಕಾಲದ (730-1260) ಬಂಗಾಲದ ಶಿಲ್ಪಗಳು ವೈವಿಧ್ಯಪೂರ್ಣವಾಗಿವೆ. ಅವನ್ನು ರಾಜಮಹಲ್ ಪ್ರಾಂತ್ಯದ ನೀಲಿ-ಕಪ್ಪು ಛಾಯೆಯ ಬಳಪಕಲ್ಲಿನಲ್ಲಿ ಗುಪ್ತಶಿಲ್ಪಗಳ ಅನುಕರಣೆಯಲ್ಲಿ ಕಡೆಯಲಾಗಿದೆ. ಬೊಜ್ಜು ದೇಹದ ಒರಟಾದ ಮೂರ್ತಿಗಳಾಗಿದ್ದರೂ ಫಲಕಗಳ ಮೇಲಿನ ಶಿಲ್ಪಕೃತಿಗಳು ಸರಳವಾಗಿ ದುಂಡಾಗಿ ಚಲನಾತ್ಮಕವಾಗಿವೆ. 10ನೆಯ ಶತಮಾನದ ವೇಳೆಗೆ ಉಡುಪು, ಆಭರಣಗಳು, ಹಿನ್ನೆಲೆ ಇವು ಸಂಪದ್ಭರಿತವೂ ಆಕರ್ಷಕವೂ ಅದುವಲ್ಲದೆ, ಕೃಶವಾದರೂ ಶಕ್ತಿಯುತವಾದ ದೇಹದ ಮತ್ತು ನೀಳ ಸ್ನಿಗ್ಧ ಮುಖದ ಸತ್ತ್ವಪೂರ್ಣ ಕೃತಿಗಳು ನಿರ್ಮಾಣವಾದುವು. 11ನೆಯ ಶತಮಾನದಲ್ಲಿ ಮೇಲ್ನೋಟದ ಸೊಬಗಿಗೆ ಪ್ರಾಧಾನ್ಯ ಪ್ರಾಪ್ತವಾಯಿತು. ಶಿಲ್ಪ ನಿಸ್ಸತ್ತ್ವವಾಯಿತು. ಅತಿ ನೀಳ ದೇಹ, ಅಸಹಜ ಸ್ನಿಗ್ಧತೆ, ಸೋಗಿನ ಚಲನೆ, ಅತ್ಯಾಲಂಕಾರದ ಉಡುಪುಗಳು ಮತ್ತು ಆಭರಣಗಳು-ಇವು ಈ ಶಿಲ್ಪಕೃತಿಗಳ ಲಕ್ಷಣಗಳು. ಮೊದಮೊದಲು ಅಕೃತ್ರಿಮ ಧಾರ್ಮಿಕ ಭಾವನೆಗಳಿಂದ ಪ್ರೇರಿತವಾದ ಶಿಲ್ಪನಿರ್ಮಾಣ, ಕ್ರಮೇಣ ಮತಿಯ ದೃಷ್ಟಿಯಿಂದ ಶುದ್ಧವಾಗಿದ್ದರೂ ಅಂತಸ್ಸತ್ತ್ವರಹಿತವಾದ ಆಸ್ಥಾನೋಚಿತವಾದ ವಿಷಯಲಂಪಟತೆಯನ್ನು ಬೆಳೆಸಿಕೊಂಡಿತು.

	ಬಾಸ್ಟನ್ ಸಂಗ್ರಹಾಲಯದಲ್ಲಿರುವ ಬುದ್ಧ ವಿಗ್ರಹ ಮೊದಲನೆಯ ಕಾಲದ ಶೈಲಿಯ ಉತ್ತಮ ನಿದರ್ಶನ. ಭೂಸ್ಪರ್ಶ ಮುದ್ರೆಯಲ್ಲಿ ವಿಶ್ವಪದ್ಮಾಸನದ ಮೇಲೆ ಕುಳಿತ ಧ್ಯಾನಿ ಬುದ್ಧನ ಕಿರೀಟ, ಕಂಠಹಾರ ಮತ್ತು ಇತರ ಆಭರಣಗಳು ಅಸಹಜವೆನಿಸಿದರೂ ಮಹಾಯಾನ ಪದ್ಧತಿಯಲ್ಲಿ ಬುದ್ಧನ ದೈವೀಕರಣದ ಪ್ರಯತ್ನದಲ್ಲಿ ಅತನನ್ನು ವಿಶ್ವಸಾಮ್ರಾಟನೆಂದು ಪ್ರತಿಪಾದಿಸುವ ನಿದರ್ಶನ ಇದೆಂದು ಹೇಳಬಹುದು. ಅದರ ಪ್ರಭಾವಳಿಯಲ್ಲಿ ಗೌತಮನ ಜನನ, ಮಹಾ ಪರಿನಿರ್ವಾಣ ಮೊದಲಾದ ಏಳು ದೃಶ್ಯಗಳನ್ನೂ ಪೀಠದಲ್ಲಿ ಭಕ್ತರ ಮತ್ತು ಯಕ್ಷರ ಮೂರ್ತಿಗಳನ್ನೂ ಕೆತ್ತಲಾಗಿದೆ. ಕಲ್ಕತ್ತೆಯ ವಂಗೀಯ ಸಾಹಿತ್ಯ ಪರಿಷತ್ತಿನ ಸಂಗ್ರಹದಲ್ಲಿರುವ ಗಮನಾರ್ಹ ಬುದ್ಧ ವಿಶ್ವಪದ್ಮಾಸನದ ಮೇಲೆ ಸಮಪಾದ ಸ್ಥಾನಕ ಭಂಗಿಯಲ್ಲಿ ನಿಂತಂತೆ ರೂಪಿತನಾಗಿದ್ದಾನೆ. ಪೀಠದ ಮೇಲೆ 9ನೆಯ ಶತಮಾನದ ಲಿಪಿಯಲ್ಲಿ ಬೌದ್ಧ ತತ್ತ್ವದ ಕೆತ್ತನೆಯಿದೆ. ಅದರ ಪ್ರಭಾವಳಿಯಲ್ಲೂ ಬುದ್ಧನ ಜೀವನದ ಏಳು ದೃಶ್ಯಗಳ ಕೆತ್ತನೆಗಳಿವೆ. ಆಸೀನ ಬುದ್ಧನ ಅಪರೂಪದ ಭಂಗಿಯ ಒಂದು ಮೂರ್ತಿ ಕಲ್ಕತ್ತದ ಅಶುತೋಷ್ ಸಂಗ್ರಹದಲ್ಲಿದೆ. ಯೋಗಾಸನಸ್ಥ ಬುದ್ಧನ ತೊಡೆಗಳ ಮೇಲೆ ಸೇರಿಸಿದ ಕೈಗಳಲ್ಲಿ ಭಿಕ್ಷಾಪಾತ್ರೆಯನ್ನಿಡಲಾಗಿದೆ. ಮರದ ಮೇಲಿರುವ ಮಂಗ ಜೇನುಗೂಡಿನಿಂದ ಬುದ್ಧನಿಗೆ ಜೇನು ತರಲು ಮರವೇರುತ್ತಿರುವ ದೃಶೈ ಪೀಠದ ಮೇಲೆ ಇದೆ. ದಿನಾಜ್‍ಪುರದ ಸುರೋಹರ್‍ನಲ್ಲಿ ಸಿಕ್ಕಿರುವ 10ನೆಯ ಶತಮಾನದ ತೀರ್ಥಂಕರ ವೃಷಭನಾಥನ ಶಿಲ್ಪ ಗುಡಿಯ ಆಕಾರದಲ್ಲಿದೆ. ಫಲಕದ ಮಧ್ಯದಲ್ಲಿ ಧ್ಯಾನಮಗ್ನ ವೃಷಭನ ಮೂರ್ತಿಯ ಸುತ್ತಲ ಪ್ರಭಾವಳಿಯಲ್ಲಿ 23 ತೀರ್ಥಂಕರು ಶಿಲ್ಪಗಳಿವೆ. ಇಬ್ಬದಿಗಳಲ್ಲಿ ಚಾಮರಧಾರಿಗಳು, ಮೇಲ್ಭಾಗದಲ್ಲಿ ಹಾರುತ್ತಿರುವ ವಿದ್ಯಾಧರರು 2 ಪೀಠದ ಮೇಲೆ ಎರಡು ಸಿಂಹಗಳು ಅದರ ತಳಭಾಗದಲ್ಲಿ ವೃಷಭ ಮತ್ತು ಭಕ್ತ ದಂಪತಿಗಳು-ಇವರ ಚಿತ್ರಗಳನ್ನು ಕೆತ್ತಲಾಗಿದೆ. ಇಂಥದೇ ಮತ್ತೊಂದು ಶಿಲ್ಪ ಮಿಡ್ನಾಪುರ ಜಿಲ್ಲೆಯ ಬಾರಾಭೂಮ್‍ನಲ್ಲಿ ದೊರಕಿದೆ. ಕಾಯೋತ್ಸರ್ಗ ಮುದ್ರೆಯಲ್ಲಿರುವ ಪಾಶ್ರ್ವನಾಥ ಮತ್ತು ಶಾಂತಿನಾಥರ ಪ್ರತಿಮೆಗಳ ಮೇಲೆ ನವಗ್ರಹಗಳನ್ನು ಕಡೆದಿರುವ 11-12ನೆಯ ಶತಮಾನದ ಶಿಲ್ಪಗಳು ಹಲವೆಡೆ ದೊರಕಿವೆ. ಆ ಕಾಲದ ಶಿವ-ಪಾರ್ವತಿ ವಿವಾಹ ನಿರೂಪಣೆಯ ಶಿಲ್ಪಗಳು ದಕ್ಷಿಣ ಭಾರತದ ಕಲ್ಯಾಣಸುಂದರ ಶಿಲ್ಪಗಳಷ್ಟು ಸುಂದರವಲ್ಲವಾದರೂ ಸ್ಥಳೀಯ ವೈವಾಹಿಕ ಪದ್ಧತಿಗಳ ವಿಚಾರವಾಗಿ ಬೆಳಕುಚೆಲ್ಲುತ್ತವೆ. ಹತ್ತು ಹನ್ನೆರಡು ಕೈಗಳುಳ್ಳ ನಟರಾಜ ಪರಿವಾರ ಗಣಗಳ ನಡುವೆ ವೃಷಭವಾಹನವಾಗಿ ನೃತ್ಯದಲ್ಲಿ ತಲ್ಲೀನನಾಗಿರುವಂತೆ ತೋರಿಸುವ ಶಿಲ್ಪಗಳು ಅದೇ ಕಾಲದವು. ಢಾಕಾ ಜಿಲ್ಲೆಯ ಶಂಕರ ಭಾಂದಾದ ನಟರಾಜ ಸತ್ತ್ವಪೂರ್ಣ ಸುಂದರ ಕೃತಿ. ಅಲ್ಲಿರುವ ವಿರೂಪಾಕ್ಷ ಶಿಲ್ಪ ಕರಾಳತೆಯನ್ನು ರೂಪಿಸುವ ಉತ್ತಮ ಕೃತಿ ಸೇನರ ಕಾಲದ, ಅವರ ಇಷ್ಟದೈವವಾದ, ಪಂಚಮುಖಿ ದಶಬಾಹು ಸದಾಶಿವನ ಅನೇಕ ಸುಂದರ ಶಿಲ್ಪಗಳು ಬಂಗಾಲದಲ್ಲಿ ಸಿಕ್ಕಿವೆ. ರಾಜಷಾಹಿ ಸಂಗ್ರಹಾಲಯದ 10ನೆಯ ಶತಮಾನದ ಗರುಡ ಮತು 11ನೆಯ ಶತಮಾನದ ಚತುರ್ಭುಜ ಗಜಲಕ್ಷ್ಮಿ ಸರಸ್ವತಿ ಶಿಲ್ಪಗಳು ಉಲ್ಲೇಖಾರ್ಹ. ಲಕ್ಷ್ಮಣಸೇನನ ಕಾಲದ ಶಾಸನವುಳ್ಳ (12ನೆಯ ಶತಮಾನ) ಸಿಂಹವಾಹಿನಿ ದುರ್ಗೆಯ ಕೈಗಳಲ್ಲಿ ವರ, ಅಂಕುಶ, ಪದ್ಮ ಮತ್ತು ಕಮಂಡಲುಗಳಿವೆ. ಇಬ್ಬದಿಗಳಲ್ಲೂ ಆನೆಗಳು ಅಭಿಷೇಕ ಮಾಡುತ್ತಿವೆ. ಢಾಕಾ ಸಂಗ್ರಹಾಲಯದಲ್ಲಿ ಇನ್ನೂ ಅನೇಕ ಶಿಲ್ಪಗಳನ್ನು ನೋಡಬಹುದು. 8-13ನೆಯ ಶತಮಾನಗಳ ಬಂಗಾಲದ ಮೂರ್ತಿಶಿಲ್ಪಗಳಲ್ಲಿ ತಾಂತ್ರಿಕ ಪರಿಪಕ್ವತೆಯನ್ನು ಕಾಣಬಹುದಾದರೂ ಅವುಗಳ ಸೌಮ್ಯತೆ ಮತ್ತು ಲಾವಣ್ಯ ಕೇವಲ ಯಾಂತ್ರಿಕವಾಗಿವೆ. ಮುಸ್ಲಿಮರ ಕಾಲದ ಅನಂತರ ಗಮನಾರ್ಹ ಶಿಲ್ಪಗಳೇನೂ ಕಾಣಬರುವುದಿಲ್ಲ.

	ವಾಸ್ತುಶಿಲ್ಪ: ಬಂಗಾಲ ಪ್ರದೇಶ ವಿಶಾಲವೂ ಹಲವಾರು ಪ್ರಮುಖ ಸಂಸ್ಕøತಿಗಳ ರಾಜವಂಶಗಳ ನೆಲೆಯೂ ಆಗಿದ್ದರೂ, ಅಲ್ಲಿ ವಾಸ್ತು ವಿಶೇಷಗಳು ಅತಿವಿರಳವಾಗಿವೆ. ಅದಕ್ಕೆ ಕಾರಣವೆಂದರೆ ಅಲ್ಲಿಯ ಮಣ್ಣಿನ ಗುಣ ಮತ್ತು ವಾಯುಗುಣ. ಬಂಗಾಲದ ಬಹು ಭಾಗ ಮೆಕ್ಕಲು ಮಣ್ಣಿನ ಮೈದಾನ. ಅಲ್ಲಿ ಹೆಚ್ಚು ಮಳೆಯಾಗುತ್ತದೆ. ಅಲ್ಲಿ ಹರಿಯುವ ಅನೇಕ ನದಿಗಳು ಬಹುಮಟ್ಟಿಗೆ ಪ್ರವಾಹ ಭರಿತವಾಗಿರುತ್ತವೆ. ಈ ಕಾರಣದಿಂದ ಪ್ರಾಚೀನ ವಸತಿಗಳನ್ನು ದಿಬ್ಬಗಳ ಮೇಲೆ ನಿರ್ಮಿಸಲಾಗುತ್ತಿತ್ತು. ಮೊದಲ ಕಾಲದ ಕಟ್ಟಡಗಳು ಕಣ್ಮರೆಯಾಗುತ್ತಿದ್ದುವು. ಕಟ್ಟಡಕ್ಕೆ ಉಪಯುಕ್ತವಾದ ಕಲ್ಲುಗಳ ಅಭಾವದಿಂದಾಗಿ ಈ ಪ್ರದೇಶದಲ್ಲಿ ಇಟ್ಟಿಗೆಯ ಕಟ್ಟಡಗಳು ಸಾಮಾನ್ಯವಾಗಿದ್ದುವು. ಅವು ಹೆಚ್ಚು ಕಾಲ ಬಾಳುತ್ತಿರಲಿಲ್ಲ. ಹೆಚ್ಚು ಮಳೆಯಿಂದಾಗಿ ಸ್ವಚ್ಛಂದವಾಗಿ ಬೆಳೆಯುತ್ತಿದ್ದ ಮರಗಿಡಗಳು ಅರಕ್ಷಿತ ಕಟ್ಟಡಗಳನ್ನು ನೆಲಸಮಗೊಳಿಸುತ್ತಿದ್ದವು. ಹೀಗಾಗಿ ಅಲ್ಲಿ ಉಳಿದಿರುವ ಪ್ರಾಚೀನ ವಾಸ್ತು ನಿರ್ಮಾಣಗಳು ಬಲು ವಿರಳ. ಬಂಗಾಲದ ನೈಋತ್ಯ ಭಾಗದಲ್ಲಿ ಬಂಕುರಾ ಮತ್ತು ಬದ್ರ್ವಾನ್ ಜಿಲ್ಲೆಗಳಲ್ಲಿ ಕಲ್ಲಿನ ಕಟ್ಟಡಗಳು ಅಸ್ತಿತ್ವದಲ್ಲಿವೆ. ಉಳಿದ ಭಾಗಗಳಲ್ಲಿ ಇಟ್ಟಿಗೆಯಿಂದ ನಿರ್ಮಿಸಿದ, ಇಳಿಜಾರು ಚಾವಣಿಯ ವಾಸ್ತು ನಿರ್ಮಾಣಗಳು ಹೆಚ್ಚು. ಜಾನಪದ ವಾಸ್ತುನಿರ್ಮಾಣಗಳಲ್ಲಿ ಮಣ್ಣಿನ ಗೋಡೆಯೂ ಬಾಗಿದ ಬಿದುರಿನಿಂದ ನಿರ್ಮಿಸಿದ, ತುದಿಯಲ್ಲಿ ಒಂದುಗೂಡುವ ಚಾವಣಿಯೂ ಇರುತ್ತಿದ್ದವು. ಈ ಮಾದರಿಯಲ್ಲೇ ಶಾಶ್ವತ ಸ್ಮಾರಕಗಳನ್ನು ರೂಪಿಸಿರುವುದು ಬಂಗಾಲದ ಸ್ಥಳೀಯ ಶೈಲಿಯ ವೈಶಿಷ್ಟ್ಯ. ಬಂಗಾಲದ ವಾಸ್ತುಶಿಲ್ಪ ಅವಶೇಷಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದು. 1. ನೈಋತ್ಯ ಬಂಗಾಲದ ಒರಿಸ್ಸಾ ಶೈಲಿಯಿಂದ ಪ್ರೇರೇಪಿತವಾದ ಮತ್ತು ಅನಂತರದ ಕಾಲದಲ್ಲಿ ಜಾನಪದ ಶೈಲಿಯಿಂದ ಪ್ರೇರೇಪಿತವಾದ ಸ್ಥಳೀಯ ಶೈಲಿಯ ಕಟ್ಟಡಗಳು, 2. ಹಿಂದೂ ಬೌದ್ಧ ಮತಗಳಿಂದ ಉತ್ತೇಜಿತಗೊಂಡು ಸ್ಥಳೀಯ ಶೈಲಿಯಲ್ಲಿ ಬೆಳೆದು ಬಂದ ಬೃಹತ್ ಸಂಘಾರಾಮ ಕಟ್ಟಡಗಳು ಮತ್ತು 3. ಪಾಲ-ಸೇನ ದೊರೆಗಳ ಅಶ್ರಯದಲ್ಲಿ ಪ್ರವರ್ಧಮಾನಕ್ಕೆ ಬಂದು, ಮುಸಲ್ಮಾನರ ಕಾಲದವರೆಗೆ ಅಸ್ತಿತ್ವದಲ್ಲಿದ್ದ ಕಟ್ಟಡಗಳು ಕೊನೆಯ ಎರಡು ಶೈಲಿಗಳು ಮಿಳಿತವಾಗಿ ಕಾಲಾನುಕ್ರಮದಲ್ಲಿ ಸಾಗರೋತ್ತರ ಪ್ರದೇಶಗಳ ವಾಸ್ತು ನಿರ್ಮಾಣಗಳಿಗೆ ಪ್ರೇರಣೆ ನೀಡಿದುವು.

	ನೈಋತ್ಯ ಬಂಗಾಲದ ಮೊದಲನೆಯ ಗುಂಪಿನ, ವಾಸ್ತು ಅವಶೇಷಗಳನ್ನು ಎರಡು ಬಗೆಯಾಗಿ ವಿಂಗಡಿಸಬಹುದು. ಒರಿಸ್ಸ ಶೈಲಿಯ ಕಟ್ಟಡಗಳು ಮತ್ತು ಸ್ಥಳೀಯ ಜಾನಪದ ವಾಸ್ತುನಿರ್ಮಾಣಗಳು. ಮೊದಲನೆಯ ಬಗೆಯ ಕಟ್ಟಡಗಳು ಇಲ್ಲಿಯ ಎತ್ತರವಾದ ಶಿಖರದಿಂದ ಕೂಡಿದ. ಒಂದು ಕೋಣೆ ಇರುವ ಗುಡಿಗಳು. ಇವು ಭುವನೇಶ್ವರ ದೇವಾಲಯಗಳ ಮಾದರಿಯಲ್ಲಿದ್ದರೂ ಸಣ್ಣವು. ಶಿಖರ ಎರಡಂತಸ್ತುಗಳುಳ್ಳದ್ದು. ಈ ಅಂತಸ್ತುಗಳು ಜೋಡು ಕಪೋತಗಳಿಂದ ಪ್ರತ್ಯೇಕಗೊಂಡಿವೆ. ಲಂಬಾಕೃತಿಯ ಶಿಖರಗಳ ಮೇಲಿನ ಗಿಡ್ಡಗಲದ ಕಪೋತಗಳು ವೈದೃಶ್ಯ ಭಾವದ ಸೌಂದರ್ಯವನ್ನು ದ್ವಿಗುಣಗೊಳಿಸುತ್ತವೆ. ಬದ್ರ್ವಾನ್ ಜಿಲ್ಲೆಯ ಬುರಾಕರ್ ಎಂಬಲ್ಲಿ ಇಂಥ ಗುಡಿಗಳ ಸಮೂಹವಿದೆ. ಬಹೂಲರಾದ ಸಿದ್ಧೇಶ್ವರ ಗುಡಿ ಈ ಶೈಲಿಯ ಉತ್ತಮ ನಿದರ್ಶನ. 10ನೆಯ ಶತಮಾನದ ಈ ಕಟ್ಟಡವನ್ನು ಇಟ್ಟಿಗೆಗಳಿಂದ ಕಟ್ಟಿ ಗೋಡೆಗಳ ಮೇಲ್ಭಾಗವನ್ನು ಸುಟ್ಟ ಮಣ್ಣಿನ ಫಲಕಗಳ ಮೇಲಿರುವ ಉಬ್ಬು ಶಿಲ್ಪಗಳಿಂದ ಅಲಂಕರಿಸಲಾಗಿದೆ. ಇಲ್ಲಿ ಅಧಿಕ ಸಂಖ್ಯೆಯ ಶಿಲ್ಪಗಳಿದ್ದರೂ, ಇವು ಅತಿಯಾದ ಅಲಂಕರಣವೆನಿಸಿದೆ, ರಮ್ಯತೆಯನ್ನು ಹೆಚ್ಚಿಸುತ್ತವೆ. ಮೊದಲನೆಯ ಗುಂಪಿನ ಎರಡನೆಯ ರೀತಿಯ, ದಕ್ಷಿಣ ಬಂಗಾಲದ ಜಾನಪದ ವಾಸ್ತುಶೈಲಿಯ ಕಟ್ಟಡಗಳನ್ನು ಅಲ್ಲಿ ದೊರಕುವ ಜಂಬುಕಲ್ಲಿನಲ್ಲಿ ಅಥವಾ ಹೆಚ್ಚಾಗಿ ಇಟ್ಟಿಗೆಯಲ್ಲಿ ಜೋಪಡಿಯಾಕಾರದಲ್ಲಿ ಕಟ್ಟಲಾಗುತ್ತಿತ್ತು. ಕಾಲಕ್ರಮದಲ್ಲಿ ಮರದ ಗೋಡೆಗಳ ಮತ್ತು ಬಿದಿರು ಚಾವಣಿಯ ಕಟ್ಟಡ ಶೈಲಿ ಮುಂದುವರಿದು ಅಲ್ಲಿಯ ಕಾಡುಗಳಲ್ಲಿದ್ದ ಅವರ ಪೂರ್ವಜರ ಕುಟೀರಗಳನ್ನು ಹೋಲುವ ಕಟ್ಟಡಗಳು ಬಂದುವು. ಅವುಗಳ ಇಳಿಜಾರದ ಚಾವಣಿ ಮತ್ತು ಬಾಗಿದ ಕಪೋತಗಳು ಜಾನಪದ ಶೈಲಿಗಿಂತ ಪ್ರಗತಿದಾಯಕವಾಗಿದ್ದರೂ ಮೇಲದರ್ಜೆಗೇರಲಿಲ್ಲ. ಈ ಗುಡಿಗಳ ಗೋಡೆಗಳು ನೇರವಾಗಿವೆ. ಅವುಗಳ ಮೇಲ್ಭಾಗದಿಂದ ಬಿಲ್ಲಿನ ಅಕಾರದಲ್ಲಿ ಬಾಗಿದ ಚಾವಣಿಯ ಭಾಗ ಆರಂಭವಾಗುತ್ತದೆ. ಅದರಿಂದ ಚಾವಣಿ ಮತ್ತು ಕಪೋತಗಳು ಪರವಲಯದ ಆಕಾರ ಪಡೆಯುತ್ತವೆ. ಆ ಪ್ರದೇಶದ ಅಧಿಕ ಮಳೆಯ ನೀರು ಚಾವಣಿಯಿಂದ ಹರಿದುಹೋಗುವುದಕ್ಕೆ ತಕ್ಕಹಾಗೆ ಇದು ನಿರ್ಮಿತವಾಗಿವೆ. ಬಂಗಾಲದ ಕಟ್ಟಡಗಳಲ್ಲಿ ಕೊನೆಯವರೆಗೂ ಈ ವಾಸ್ತು ಲಕ್ಷಣ ಉಳಿದುಬಂತು. ಬಾಗಿದ ಚಾವಣಿಯ ಮೇಲೆ ಶಿಖರಗಳನ್ನು ನಿರ್ಮಿಸಲಾಗುತ್ತಿತ್ತು. ಈ ಶಿಖರಗಳ ಸಂಖ್ಯೆಗೆ ಅನುಗುಣವಾಗಿ ದೇವಾಲಯಗಳನ್ನು ಪಂಚರತ್ನ ನವರತ್ನ ಗುಡಿಗಳೆಂದು ಕರೆಯುತ್ತಿದ್ದರು. ಕಟ್ಟಡದ ಮುಂಭಾಗದಲ್ಲಿ ಮೂರು ಕಮಾನುಗಳು ಮತ್ತು ಪ್ರತಿಯೊಂದು ಕಮಾನಿನ ಕೆಳಗೆ ಕಂಬಗಳಿದ್ದ ಬಾಗಿಲುಗಳು ಇರುತ್ತಿದ್ದುವು. ಕಮಾನುಗಳಲ್ಲಿ ಹಲವು ಚಾಚಿದ ಕೋಡುಗಳಿರುತ್ತಿದ್ದುವು. ಕಂಬಗಳು ಸ್ಥೂಲವಾಗಿರುತ್ತಿದ್ದುವು. ಬಂಗಾಲದ ವಾಸ್ತು ಇತಿಹಾಸದ ಉದ್ದಕ್ಕೂ ಇವು ಗಮನಾರ್ಹವಾಗಿವೆ. ಕಟ್ಟಡಗಳ ಒಳಭಾಗ ಒಂದು ವಿಶಾಲ ಹಜಾರ ಅಥವಾ ಥಾಕೂರ್-ಬಡಿ ಅಗಿತ್ತು. ಅದರ ಒಂದು ಬದಿಯಲ್ಲಿ ಪ್ರತಿಮೆಯನ್ನು ಸ್ಥಾಪಿಸಲು ವೇದಿಕೆ ಇರುತ್ತದೆ. ಮೇಲಂತಸ್ತಿನಲ್ಲಿ ಈ ಹಜಾರದ ಸುತ್ತಲ ಉಪ್ಪರಿಗೆಯ ಮೊಗಸಾಲೆ ಇರುತ್ತದೆ. ಗೋಡೆಗಳ ಮೇಲೆ ಸುಟ್ಟ ಜೇಡಿಮಣ್ಣಿನ ಫಲಕಗಳ ಅಲಂಕರಣವಿರುತ್ತದೆ. ಅಲಂಕರಣ ಶಿಲ್ಪಗಳಲ್ಲಿ ರಾಮಾಯಣ ಮಹಾಭಾರತಗಳ ಮತ್ತು ಸಾಮಾನ್ಯ ಜನಜೀವನಕ್ಕೆ ಸಂಬಂಧಿಸಿದ ದೃಶ್ಯಗಳ ನಿರೂಪಣೆ ಇರುತ್ತದೆ. ಬಂಕುರಾ ಜಿಲ್ಲೆಯ ವಿಷ್ಣುಪುರದಲ್ಲಿ ಮಲ್ಲರಾಜ ಮನೆತನದ ದೊರೆಗಳು ಕಟ್ಟಿಸಿದ ದೇವಾಲಯಗಳು ಈ ರೀತಿಯವು. ಅಲ್ಲಿಯ ಜಂಬುಕಲ್ಲಿನ ಏಕಶಿಖರದ ಲಾಲ್ಜುಯಿ (1658), ಇಟ್ಟಿಗೆಯ ಶಿಖರದ ಮದನಮೋಹನ (1694). ಇಟ್ಟಿಗೆಯ, ಪಂಚರತ್ನ ಶೈಲಿಯ, ಶ್ಯಾಮರಾಯಿ (1643), ಜಂಬುಕಲ್ಲಿನ ಪಂಚರತ್ನದ ಮದನಗೋಪಾಲ (1665) ಇವು 17ನೆಯ ಶತಮಾನದ ಕಟ್ಟಡಗಳಾದರೂ ಹಳೆಯ ಶೈಲಿಯ ಗುಡಿಗಳು ನೂರಾರು ಇವೆ. ಈ ಶೈಲಿಗೆ ಸೇರಿದ ಎರಡು ಗುಡಿಗಳ ಜೋಡ್-ಬಂಗ್ಲಾಗಳ ಮುಂಭಾಗದಲ್ಲಿ ಎರಡು ಗುಡಿಸಿಲುಗಳನ್ನು ಸೇರಿಸಿದಂತೆ ಕಂಡರೂ ಒಳಭಾಗದಲ್ಲಿ ಮಧ್ಯದಲ್ಲಿ ಒಂದೇ ಥಾಕೂರ್-ಬಡಿ ಇದ್ದು, ಪಾಶ್ರ್ವಗಳಲ್ಲಿ ಕೋಣೆಗಳಿರುತ್ತವೆ. ಅವುಗಳಲ್ಲೊಂದರಲ್ಲಿರುವ ಮೆಟ್ಟಿಲುಸಾಲು ಮೇಲಿನ ಮೊಗಸಾಲೆಗೆ ಒಯ್ಯುತ್ತವೆ. ಹೂಗ್ಲಿ ಜಿಲ್ಲೆಯ ಗುಪ್ತವಾರದ ಚೈತನ್ಯಮಂದಿರ ಮತ್ತು ವಿಷ್ಣುಪುರದ ಕೆಸ್ತರಾಯ (1726) ಮಂದಿರಗಳು ಈ ಮಾದರಿಯವು.

	ಎರಡನೆಯ ಗುಂಪಿನ ಹಿಂದೂ ಬೌದ್ಧ ಸಮ್ಮಿಳಿತ ಶೈಲಿಯ ಕಟ್ಟಡಗಳಿಗೆ ಉತ್ತಮ ನಿದರ್ಶನವೆಂದರೆ ರಾಜಷಾಹಿ ಜಿಲ್ಲೆಯ ಷಹಾಡ್‍ಪುರದ ಬೃಹತ್ ನಿರ್ಮಾಣಗಳು. ಪಾಲ ವಂಶದ ಧರ್ಮಪಾಲ (770-810) ಇಟ್ಟಿಗೆಯಲ್ಲಿ ಕಟ್ಟಿಸಿದ ಮಹಾವಿಹಾರ ಈಗ ಬಹುಮಟ್ಟಿಗೆ ಪಾಳುಬಿದ್ದು ದೊಡ್ಡಮಣ್ಣಿನ ದಿಬ್ಬವಾಗಿದೆ. ವಿಶಾಲ ಪ್ರಾಂಗಣದ ಒಳಮೊಗಶಾಲೆಯಲ್ಲಿ 175ಕ್ಕೂ ಹೆಚ್ಚಿನ ಪ್ರತ್ಯೇಕ ಕೋಣೆಗಳಿವೆ. ಮಧ್ಯಭಾಗದಲ್ಲಿ ಶಿಲುಬೆಯಾಕಾರದ ತಳಪಾಯವುಳ್ಳ ಮಹಾ ವಿಹಾರದ ಕಟ್ಟಡವಿದೆ. ಅದು ಬೌದ್ಧ ವಿಹಾರವಾದರೂ ಹಿಂದೂ ವಾಸ್ತುಶೈಲಿಯ ಪಿರಿಮಿಡ್ಡಿನಾಕಾರದಲ್ಲಿ ಮೇಲಕ್ಕೆ ಹೋದಂತೆ ಸಣ್ಣದಾಗುವ ಅಂತಸ್ತುಗಳಿರುವ ಪ್ರಾಸಾದ ಶೈಲಿಯ ಕಟ್ಟಡ. ಇಟ್ಟಿಗೆ ಗೋಡೆಯ ಮೇಲೆ ಸುಟ್ಟ ಜೇಡಿಮಣ್ಣಿನ ಫಲಕಗಳ ಅಲಂಕರಣವಿದೆ. ಇದು ಮೊದಲು ಹಿಂದೂ ಧರ್ಮದ ಮಂದಿರವಾಗಿದ್ದು ತರುವಾಯ ಪಾಲ ದೊರೆಯಿಂದ ಬೌದ್ಧ ಕಟ್ಟಡವಾಗಿ ಪರಿವರ್ತಿತವಾಗಿರಬಹುದು. ಈ ಕಟ್ಟಡದ ತಳಪಾಯ ಮತ್ತು ಏರುನಕ್ಷೆಯ ದೃಷ್ಟಿಯಿಂದ ಪ್ರತಿ ಅಂತಸ್ತಿನ ಪ್ರದಕ್ಷಿಣಾಪಥಗಳೂ ಸೇರಿದಂತೆ ಇದಕ್ಕೆ ಅತ್ಯಂತ ಸಮೀಪದ ಸಾಮ್ಯವನ್ನು ಜಾವಾದ ಬೊರೊಬುದೂರಿನ ಬೃಹದ್ದೇವಾಲಯದಲ್ಲಿ ಕಾಣಬಹುದು. ಮಂದಿರದ ಮಧ್ಯದ ಗರ್ಭಗುಡಿಯಲ್ಲಿ ಪೂಜಾಮೂರ್ತಿ ಇತ್ತು. ಉತ್ತರದಿಂದ ಮೆಟ್ಟಿಲುಗಳು ಕಟ್ಟಡದ ಸುತ್ತಲೂ ಇದ್ದ ಮೊಗಸಾಲೆಗೆ ಒಯ್ಯುತ್ತಿದ್ದವು. ಆ ಮೊಗಸಾಲೆಯಿಂದ ಗರ್ಭಗುಡಿಗೆ ಮತ್ತು ನಾಲ್ಕು ಭಾಗಗಳಲ್ಲಿದ್ದ ಉಪಗುಡಿಗಳಿಗೆ ಪ್ರವೇಶವಿತ್ತು. ಈ ಉಪಗುಡಿಗಳಲ್ಲಿ ಬಹುಶಃ ದೊಡ್ಡ ಕಂಚಿನ ಮೂರ್ತಿಗಳನ್ನಿಡಲಾಗಿತ್ತು. ಹಿಂದೂ, ಬೌದ್ಧ ಮತ್ತು ಜೈನ ಧರ್ಮಗಳ ಭಕ್ತರು ಈ ವಿಹಾರಕ್ಕೆ ಪೂಜೆ ಸಲ್ಲಿಸುತ್ತಿದ್ದರೆಂದು ತಿಳಿದುಬರುತ್ತದೆ. ಗೋಡೆಗಳ ಮೇಲೆ ಪುರಾಣೇತಿಹಾಸಗಳ ಮುಖ್ಯವಾಗಿ ಕೃಷ್ಣಲೀಲೆಯ ದೃಶ್ಯಗಳಿವೆ. ಇಂಥ ಭವ್ಯ ನಿರ್ಮಾಣ ಪೂರ್ಣವಾಗಿ ನೆಲಸಮವಾಗಿರುವುದು ದುರದೃಷ್ಟಕರ ಸಂಗತಿ.

	ಮೂರನೆಯ ಗುಂಪಿನ ಸುಂದರವಾದ ಪ್ರಭಾವಶಾಲಿ ನಿರ್ಮಾಣಗಳನ್ನು ಪೌರಸ್ತ್ಯ ಶೈಲಿಯ ಉತ್ತಮ ನಿದರ್ಶನಗಳೆಂದು ಹೇಳಬಹುದು. ಪಾಲ-ಸೇನ ದೊರೆಗಳ ಪ್ರೋತ್ಸಾಹದಿಂದ ಸೇನರ ರಾಜಧಾನಿ ಲಖ್ನೌತಿಯಲ್ಲಿ ಈ ಬಗೆಯ ಶೈಲಿ ಬೆಳೆಯಿತು. ಆದರೆ 16ನೆಯ ಶತಮಾನದ ಕೊನೆಗೆ ಅದು ಮುಸ್ಲಿಮರ ವಶವಾಯಿತು. ಆಗ ತಮ್ಮ ಕಟ್ಟಡಗಳ ನಿರ್ಮಾಣಕ್ಕಾಗಿ ಅವರು ಈ ಮಂದಿರಗಳನ್ನು ಕೆಡವಿ ಕಲ್ಲುಗಳನ್ನು ಬಳಸಿಕೊಂಡುದರಿಂದ ಈ ಕಟ್ಟಡಗಳು ಹಾಳಾದುವು. ಲಖ್ನೌತಿಯಲ್ಲಿ ದೇವಾಲಯಗಳನ್ನೂ ಅರಮನೆಯ ಕೋಟೆಕೊತ್ತಲುಗಳನ್ನೂ ಬಳಿಯ ರಾಜಮಹಲ್ ಬೆಟ್ಟಗಳಲ್ಲಿ ದೊರಕುವ ಕಪ್ಪು ಬೆಸಾಲ್ಟ್ ಕಲ್ಲಿನಲ್ಲಿ ಕಟ್ಟಲಾಗಿತ್ತು. ಅನಂತರ ಕಾಲದ ಮುಸ್ಲಿಮರ ಕಟ್ಟಡಗಳಲ್ಲಿ ಬಳಸಿರುವ ಈ ಹಿಂದೂ ನಿರ್ಮಾಣಗಳ ವಾಸ್ತುಭಾಗಗಳನ್ನು ಪರಿಶೀಲಿಸುವುದರಿಂದ ಇವುಗಳ ಪರಿಚಯ ಪಡೆಯಬಹುದು. ಆಗಿನ ದೇವಾಲಯಗಳಿಗೆ ಬಹಳ ಅಲಂಕಾರಪೂರ್ಣವಾದ ಎತ್ತರದ ಅಂತಸ್ತುಗಳುಳ್ಳ ಶಿಖರ ಇದ್ದೇ ಇರುತ್ತಿತ್ತು. ಅಲ್ಲದೆ ಈ ಕಟ್ಟಡಗಳಿಗೆ ತ್ರಿಪತ್ರಕ ಕಮಾನುಗಳನ್ನು ಬಳಸಲಾಗುತ್ತಿತ್ತು. ಈ ಕಟ್ಟಡಗಳು ಬುದ್ಧಗಯೆಯ ದೇವಾಲಯವನ್ನು ಹೋಲುತ್ತಿದ್ದುವೆಂದು ಹೇಳಬಹುದಾಗಿದೆ. ಗೌರ್ ಮತ್ತು ಪಾಂಡುವಗಳ ಮಸೀದಿಗಳ ನಿರ್ಮಾಣದಲ್ಲಿ ಉಪಯೋಗಿಸಲಾದ ಶಿಲ್ಪ ಮತ್ತು ಕೆತ್ತನೆಗಳುಳ್ಳ ಶಿಲೆಗಳು ಈ ಹಿಂದೂ ದೇವಾಲಯಗಳ ಭಿತ್ತಿ ಅಲಂಕರಣವನ್ನು ತಿಳಿಸುತ್ತವೆ. ಈ ಕೆತ್ತನೆಗಳು ಭಾರತದ ಕಲಾಸಂಪ್ರದಾಯದ ಅತ್ಯುತ್ತಮ ನಿರ್ಮಾಣಗಳೆಂದೂ ಬಂಗಾಲದ ವಾಸ್ತುಶಿಲ್ಪಕಲೆಯ ಅತ್ಯಂತ ಉತ್ಕøಷ್ಟವಾದ ಕೃತಿಗಳೆಂದೂ ತಿಳಿಯುತ್ತದೆ. ವರೇಂದ್ರದಲ್ಲಿ ಬಂಗಾಲದ ಸರ್ವಶ್ರೇಷ್ಠರಾದ ಧೀಮಾನ್ ಮತ್ತು ಅವನ ಮಗ ಬಿತ್‍ಪಾಲೊ ಎಂಬ ಶಿಲ್ಪಿಗಳಿದ್ದರೆಂದೂ ಅವರ ಕೃತಿಗಳು ಅನಂತರಕಾಲದ ಸೇನರ ಕಲೆಗೆ ಮಾದರಿಯಾದುವೆಂದೂ ಬೌದ್ಧ ಚರಿತ್ರಕಾರ ತಾರಾನಾಥ ತಿಳಿಸಿದ್ದಾನೆ. ಅದೀನ ಮಸೀದಿಯ ಹಿಂಭಾಗದಲ್ಲಿರುವ ಬಾಗಿಲ ಚೌಕಟ್ಟು ಮೊದಲಿಗೆ ಲಖ್ನೌತಿಯ ವಿಷ್ಣು ದೇವಾಲಯದಲ್ಲಿತ್ತು. ಅದರ ಪರಿಶೀಲನೆಯಿಂದ ಈ ವಾಸ್ತುಶೈಲಿಯ ಸೊಬಗು ಗೊತ್ತಾಗುತ್ತದೆ. ಇಬ್ಬದಿಗಳ ಕಂಬಗಳಿಗೆ ಹಗ್ಗದಂತೆ ಸುತ್ತಿರುವ ಶೇಷ, ತಳಭಾಗದಲ್ಲಿ ಸುತ್ತಿಕೊಂಡಿರುವ ಶೇಷನ ಸುರುಳಿಗಳಂತಿರುವ ಕಂಬದ ಪೀಠ, ಬಾಗಿಲುವಾಡದ ಮೇಲಿನ ಕಪೋತಗಳಿರುವ ಇದು ಶಿಲ್ಪಕಲೆಯ ಉತ್ತಮ ಕಲಾಕೃತಿ. ಗುಪ್ತಶೈಲಿಯ ಭಾಂಡದೊಳಗಿಂದ ಹೊಮ್ಮುವ ಲತಾಗುಚ್ಛ ಇದಕ್ಕೆ ಸ್ಛೂರ್ತಿದಾಯಕವೆಂದು ಹೇಳಬಹುದು. ಆ ಕಾಲದ ಅರಮನೆ ಕೋಟೆಕೊತ್ತಲಗಳು ಸಹ ಈಗ ಉಳಿದಿಲ್ಲ. ಆದರೆ ದೊರೆ ಬಲ್ಲಾಳ ಸೇನನ ಅರಮನೆಯಿದ್ದ ಸ್ಥಳದಲ್ಲಿ ಅರಮನೆ ಕೊತ್ತಲಗಳ ಕಲ್ಲುಗಳನ್ನು ಬಳಸಿ ಕಟ್ಟಿರುವ ಮಸೀದಿಗಳಲ್ಲಿರುವ ಕಂಬಗಳು ಆ ವಾಸ್ತು ನಿರ್ಮಾಣಗಳ ಸಾಕ್ಷಿಗಳಾಗಿವೆ. ದುಂಡಾದ ಚೌಕನೆಯ ಅಥವಾ ಅಷ್ಟಮುಖಗಳುಳ್ಳ ಕಂಬಗಳು 2.7 ಮೀ, ಎತ್ತರ ಮತ್ತು 0.9 ಮೀ. ಅಗಲವಾಗಿ ಇವೆ.

	ಈವರೆಗೆ ಊಹಾತ್ಮಕ ಕಲಾನೈಪುಣ್ಯವನ್ನು ಹೂಗ್ಲಿ ಜಿಲ್ಲೆಯ ಸತ್‍ಗಾಂವ್‍ನಲ್ಲಿ (ಸಂಸ್ಕøತದ ಸಪ್ತಗಾಮ, ಈಗಿನ ತ್ರಿಬೇಣಿ) ಇರುವ ಅದೇ ಕಾಲದ ಅವಶೇಷಗಳಲ್ಲಿ ವಸ್ತುತಃ ಕಾಣಬಹುದು. ಅಲ್ಲಿಯ ಎರಡು ಕಟ್ಟಡಗಳಲ್ಲಿ ಒಂದನ್ನು ಈಗ ಮುಸ್ಲಿಮ್ ಸಮಾಧಿಯಾಗಿಯೂ ಇನ್ನೊಂದನ್ನು ಮಸೀದಿಯಾಗಿಯೂ ಪರಿವರ್ತಿಸಿಕೊಳ್ಳಲಾಗಿದ್ದರೂ ಆ ಕಟ್ಟಡಗಳು ಉಳಿದುಕೊಂಡು ಬಂದಿವೆ. ಸಮಾಧಿ ಕಟ್ಟಡದಲ್ಲಿ ಎರಡು ಕೋಣೆಗಳಿವೆ. ಮೊದಲು ಅವು ವೈಷ್ಣವ ದೇವಾಲಯದ ಅಂತರಾಳ ಮತ್ತು ಸಭಾ ಮಂಟಪಗಳಾಗಿದ್ದುದು ವ್ಯಕ್ತವಾಗುತ್ತದೆ. ಅಲ್ಲಿದ್ದ ಶಿಲ್ಪಗಳನ್ನು ಒಡೆದು ಹಾಕಲಾಗಿದೆ. ನಾಲ್ಕು ದಿಕ್ಕುಗಳಿಗೆ ನಾಲ್ಕು ಬಾಗಿಲುಗಳಿವೆ. ಅವುಗಳ ಸರಳ ಸೊಬಗು ಮನೋಹರವಾಗಿದೆ ಮತ್ತು ಅವು ಮೇಲೆ ವರ್ಣಿಸಲಾದ ವಾಸ್ತು ಲಕ್ಷಣಗಳಿಂದ ಕೂಡಿವೆ.

	ಮುಸ್ಲಿಮ್ ವಾಸ್ತು ಶಿಲ್ಪ: 13ನೆಯ ಶತಮಾನದ ಆದಿಭಾಗದಲ್ಲಿ ಬಂಗಾಲ ಮುಸ್ಲಿಮರ ವಶವಾದ ಅನಂತರ 100 ವರ್ಷಗಳ ಕಾಲ ಮುಸ್ಲಿಮ್ ಶೈಲಿಯ ಪ್ರಮುಖ ಕಟ್ಟಡಗಳಾವುವೂ ನಿರ್ಮಾಣವಾಗಲಿಲ್ಲ. ಅನಂತರ ಮಸೀದಿಗಳ, ಸಮಾಧಿಗಳ ನಿರ್ಮಾಣ ಪ್ರಾರಂಭವಾಯಿತು. ಇವು ಈ ಪ್ರದೇಶದ ಎಲ್ಲ ಕಡೆಗಳಲ್ಲೂ ಕಂಡುಬಂದರೂ ಮುಖ್ಯವಾಗಿ ಮಾಲ್ಡಾ ಜಿಲ್ಲೆಯಲ್ಲಿ ಕೇಂದ್ರೀಕೃತವಾಗಿವೆ. ಗಂಗಾ ಮತ್ತು ಮಹಾನಂದಾನದಿಗಳ ಸಂಗಮ ಸ್ಥಾನದಲ್ಲಿ ನಿರ್ಮಿಸಲಾಗಿದ್ದ ಲಖ್ನಾವತಿ (ಲಖ್ನೌತಿ) ಪಾಲ-ಸೇನರ ಕಾಲದಲ್ಲಿ ಮತ್ತು ಆಮೇಲೆ ಮುಸ್ಲಿಮರ ಕಾಲದಲ್ಲಿ ಗೌರ್ ಮತ್ತು ಪಾಂಡವ ನಗರಗಳು ಹಲವು ಭಾರಿ ರಾಜಧಾನಿಗಳಾಗಿದ್ದುವು. ಅಲ್ಲಿ ಅನೇಕ ಕೋಟೆ ಕೊತ್ತಲಗಳ, ಅರಮನೆಗಳ, ಸೇತುವೆಗಳ, ದೇವಾಲಯಗಳ, ಮಸೀದಿಗಳ ಮತ್ತು ಸಮಾಧಿಗಳ ಅವಶೇಷಗಳು ಕಂಡುಬರುತ್ತವೆ. ಅವುಗಳ ಪರಿವೀಕ್ಷಣೆಯಿಂದ ಬಂಗಾಲದ ಮುಸ್ಲಿಮ್ ವಾಸ್ತುಶಿಲ್ಪದ ಉಗಮ ಮತ್ತು ವಿಕಾಸಗಳನ್ನು ತಿಳಿಯಬಹುದು. ಅಲ್ಲಿಯ ಮುಸ್ಲಿಮ್ ವಾಸ್ತುಶಿಲ್ಪ ನಿರ್ಮಾಣಗಳನ್ನು ಮೂರು ಗುಂಪುಗಳಾಗಿ ವಿಭಾಗಿಸಬಹುದು. 1. 1200-1340ರ, ಗೌರ್ ರಾಜಧಾನಿಯಾದ್ದ ಕಾಲದ ಅವಶೇಷಗಳು 2. 1340-1430ರ ಪಾಂಡುವ ರಾಜಧಾನಿಯಾದಾಗಿನಿಂದ ಏಕ್ಲಾಖಿ ಸಮಾಧಿ ನಿರ್ಮಾಣವಾಗುವ ವರೆಗಿನ ಕಾಲದ ಅವಶೇಷಗಳು, ಮತ್ತು 3. 1442-1576, ಮತ್ತೆ ಗೌರ್ ರಾಜಧಾನಿಯಾಗಿದ್ದ ಕಾಲದ ಅವಶೇಷಗಳು.

	ಮೊದಲನೆಯ ಗುಂಪಿನ ಅವಶೇಷಗಳು ಲಖ್ನೌತಿ ಪ್ರದೇಶದಲ್ಲಿ ಬಹಳಷ್ಟು ಹಾಳಾಗಿದ್ದರೂ ಹೂಗ್ಲಿ ಜಿಲ್ಲೆಯಲ್ಲಿ ಒಂದೆಡೆಯಲ್ಲಿ, ತ್ರಿಬೇಣಿ ಮತ್ತು ಪಾಂಡುವಗಳ ಬಳಿ ಸ್ವಲ್ಪ ಮಟ್ಟಿಗೆ ಉಳಿದುಬಂದಿವೆ. ಪಾಂಡುವದ ಬಳಿಯ ಮಸೀದಿ ಬಹಳ ಮಟ್ಟಿಗೆ ನಾಶವಾಗಿದೆ. ಅದರ ಗೋಡೆಗಳನ್ನೂ ಕಮಾನುಗಳನ್ನೂ ಇಟ್ಟಿಗೆಯಲ್ಲಿ ಕಟ್ಟಲಾಗಿದ್ದರೂ ಕಂಬಗಳು ಬೆಸಾಲ್ಟ್ ಕಲ್ಲಿನವಾಗಿವೆ. ಇವು ಆ ಮೊದಲ ಹಿಂದೂ ದೇವಾಲಯಗಳಿಂದ ಕಿತ್ತು ತಂದವೆಂಬುದು ವ್ಯಕ್ತವಾಗುತ್ತದೆ. ಅದರ ನಡುವಣ ಹಜಾರದಲ್ಲಿ ಮುಖ್ಯ ಮಿಹ್ರಾಬ್‍ದ ಬಲಕ್ಕೆ ಕಲ್ಲಿನ ಉಪದೇಶ ವೇದಿಕೆ ಇದೆ. ಅದು ಹೆಚ್ಚು ವಿಶಾಲವಾದ, ಅನಂತರಕಾಲದ, ಪಾಂಡುವದಲ್ಲಿರುವ ಆದೀನ ಮಸೀದಿಗೆ ಮಾದರಿಯಾಗಿದ್ದಿರಬಹುದು. ಬಂಗಾಲದಲ್ಲಿ ಚತುರಸ್ರಾಕಾರದ ತಳಹದಿಯುಳ್ಳ, ಅನೇಕ ಗುಮ್ಮಟಗಳ ಮಸೀದಿ ಕಟ್ಟಡಗಳಲ್ಲಿ ಇದು ಪ್ರಾಚೀನತಮವಾದುದು. ಅದರ ಬಳಿಯಲ್ಲಿ 1304ರ ಸುಮಾರಿನಲ್ಲಿ ಪಾಂಡುವದ ಹಿಂದೂ ರಾಜನನ್ನು ಗೆದ್ದುದರ ಸ್ಮಾರಕವಾಗಿ ಷಾಸೂರಿಯುದ್ದೀನ್ ಎಂಬ ಮುಸ್ಲಿಮ್ ಸಂತ ಕಟ್ಟಿಸಿದನೆಂದು ಹೇಳಲಾದ ವಿಜಯಸ್ತಂಭವಿದೆ. ಇದು ದೆಹಲಿಯ ಕುತುಬ್‍ಮಿನಾರಿನ ಮಾದರಿಯಲ್ಲಿದೆ. ವಿವಿಧ ಅಂತಸ್ತುಗಳ ಪಾಶ್ರ್ವಮುಖ ಮತ್ತು ಪಕ್ಕಪಟ್ಟಿಕೆಗಳ ಅಲಂಕರಣ ಗಮನಾರ್ಹವಾದರೂ ಇದು ಗುಜ್ಜಾಗಿರುವುದರಿಂದ ಒಟ್ಟು ನೋಟ ಸುಂದರವಾಗಿಲ್ಲ. ತ್ರಿಬೇಣಿಯ ಮಸೀದಿ 16ನೆಯ ಶತಮಾನದಲ್ಲಿ ರಿಪೇರಿಗೆ ಒಳಗಾಯಿತು. 1298ರಲ್ಲಿ ನಿರ್ಮಿತವಾಯಿತೆಂದು ಅದರ ಮೇಲಿನ ಶಾಸನದಿಂದ ತಿಳಿದುಬರುತ್ತದೆ. ಅಲ್ಲಿರುವ ಜಾಫರ್‍ಖಾನ್ ಫಾಜಿóಯ ಸಮಾಧಿ ಇನ್ನೂ ಹಿಂದಿನದಾಗಿದ್ದರೂ ದುರಸ್ತಿ ಸ್ಥಿತಿಯಲ್ಲಿದೆ. ಬಹುಶಃ ಮೊದಲಿಗೆ ಕೃಷ್ಣದೇವಾಲಯವಾಗಿದ್ದ ಈ ಕಟ್ಟಡವನ್ನು ಬಿಚ್ಚಿ ಪುನನಿರ್ಮಿಸಿ, ಮಧ್ಯೆ ಮೊನಚಾದ ಮೇಲ್ತುದಿಯುಳ್ಳ ಕಮಾನುಗಳಿಂದ ಕೂಡಿದ ಇಟ್ಟಿಗೆ ಗೂಡುಗಳನ್ನು ಬೆಸಾಲ್ಟ್ ಕಲ್ಲಿನ ಗೋಡೆಗಳ ಮಧ್ಯೆ ಸೇರಿಸಲಾಗಿದೆ. ಮೊದಲು ಈ ಪ್ರದೇಶದಲ್ಲಿ ಮುಸ್ಲಿಮರು ಅನುಸರಿಸಿದ ವಾಸ್ತು ಪದ್ಧತಿಯನ್ನು ಇದರಿಂದ ತಿಳಿಯಬಹುದು.

	ಈ ಶೈಲಿಯ ಕಟ್ಟಡಗಳ ಎರಡನೆಯ ಗುಂಪಿಗೆ ನಿದರ್ಶನವಾಗಿ ಉಳಿದಿರುವುದು ಪಾಂಡುವದಲ್ಲಿ (ಈ ಮೊದಲು ಹೇಳಿದ ಪಾಂಡುವ ಅಲ್ಲ; ಲಖ್ನೌತಿಯಿಂದ 27 ಕಿ.ಮೀ. ದೂರದಲ್ಲಿರುವ ಅದೇ ಹೆಸರಿನ ಮತ್ತೊಂದು ರಾಜಧಾನಿ) ಇರುವ, ಇಡೀ ಬಂಗಾಲದ ಮುಸ್ಲಿಮ್ ಶೈಲಿಯ ಅತ್ಯಂತ ದೊಡ್ಡದಾದ ಆದೀನ ಮಸೀದಿ. ಸ್ವತಂತ್ರ ರಾಜ್ಯವನ್ನು ಕಟ್ಟಿದ ತರುವಾಯ ಕಾಲಾನುಕ್ರಮದಲ್ಲಿ ಮುಸ್ಲಿಮರು ತಮ್ಮದೇ ಆದ ಶೈಲಿಯ ನಿರ್ಮಾಣಕ್ಕೆ ಪ್ರಯತ್ನಿಸಿದರು. ಪಾಂಡುವದಲ್ಲಿ ಆಳುತ್ತಿದ್ದ ಸಿಕಂದರ್ ಷಾ (1358-89) ತನ್ನ ವೈಭವದ ಕುರುಹಾಗಿ ಮತ್ತು ರಾಜಧಾನಿಯ ಮುಸ್ಲಿಮ್ ಪ್ರಜೆಗಳ ಉಪಯೋಗಕ್ಕಾಗಿ 1364ರಲ್ಲಿ ಹಲವು ಸಾವಿರ ಮಂದಿ ಒಟ್ಟಿಗೆ ಸೇರಿ ನಮಾಜು ಮಾಡಲು ಸಾಧ್ಯವಾಗುವ ಬೃಹತ್ ಮಸೀದಿಯನ್ನು ಕಟ್ಟಿಸಿದ. ಇದರಲ್ಲಿ ವಿಸ್ತಾರವಾದ ಪ್ರಾಂಗಣವೂ ಇದರ ಸುತ್ತ 260 ಕಂಬಗಳ ಮೊಗಸಾಲೆಯೂ ಇದ್ದುವು. ಅದಕ್ಕೆ ಕಮಾನುಗಳಿಂದ ಕೂಡಿದ ಬಾಗಿಲುಗಳಿದ್ದವು. ಪಶ್ಚಿಮ ದಿಕ್ಕಿನ ಮಧ್ಯಭಾಗದಲ್ಲಿ ಬಹಳ ಎತ್ತರವಾದ ಗುಮ್ಮಟವಿತ್ತು. ಪ್ರಾಂಗಣದ ಒಳಗಡೆ ಸುತ್ತಲೂ ಮೊಗಸಾಲೆಯ ಕೈಪಿಡಿಗೋಡೆಯಲ್ಲಿ 88 ಕಮಾನುಗಳಿದ್ದುವು. ಮೊಗಸಾಲೆಯ ಗೋಡೆಯ ಮೇಲೆ ಚಾವಣಿಗೆ ಸೇರಿದ 306 ಗುಮ್ಮಟಗಳು ಎದ್ದು ಕಾಣುತ್ತಿದ್ದುವು. ಪ್ರಾಂಗಣದ ಆಗ್ನೇಯ ಮೂಲೆಯ 3 ಕಮಾನುಗಳಿಂದ ಒಳಗೆ ಹೋಗಲು ಬಾಗಿಲುಗಳನ್ನು ನಿರ್ಮಿಸಲಾಗಿತ್ತು. ಪಶ್ಚಿಮ ಗೋಡೆಯ ಉತ್ತರ ದಂಚಿನಲ್ಲಿ ಮೂರು ಸಣ್ಣ ಬಾಗಿಲುಗಳಿವೆ. ಇವುಗಳಲ್ಲಿ ಎರಡು ಬಾಗಿಲುಗಳಿಂದ ಎರಡನೆಯ ಅಂತಸ್ತಿನಲ್ಲಿರುವ ಬಾದಷಾ ಕಿ ತಖ್ತ್ ಅಥವಾ ಸುಲ್ತಾನನ ಗದ್ದುಗೆಯ ಕೋಣೆಗೆ ಹೋಗಬಹುದಿತ್ತು. ಅಲ್ಲಿ ಉಪಯೋಗಿಸಿರುವ ಕಂಬಗಳು ವೈಶಿಷ್ಟ್ಯ ಪೂರ್ಣವಾಗಿದ್ದು ಬಂಗಾಲದ ಹೊರಗೆಲ್ಲೂ ಕಂಡುಬರುವುದಿಲ್ಲ. ಮಸೀದಿಯ ಒಳಭಾಗದಲ್ಲಿ ಪಶ್ಚಿಮದ ಗೋಡೆಯಲ್ಲಿ ಪ್ರತಿ ಅಂಕಣದ ಮಧ್ಯದಲ್ಲಿ ಸುಂದರ ಕೆತ್ತನೆ ಮತ್ತು ಶಿಲ್ಪಗಳಿಂದ ಅಲಂಕೃತವಾದ ಮುನ್‍ಚಾಚಿದ ಕಮಾನು ಗೂಡುಗಳಲ್ಲಿ 32 ಮಿಹ್ರಾಬ್‍ಗಳಿದ್ದವು. ಪ್ರಾರ್ಥನಾ ಮಂದಿರದ ಮಧ್ಯದಲ್ಲಿ ಪೂರ್ವಪಶ್ಚಿಮವಾಗಿ ಹಜಾರವೂ ಎರಡು ಪಾಶ್ರ್ವಗಳಲ್ಲೂ ಉತ್ತರ-ದಕ್ಷಿಣವಾಗಿ ಐದೈದು ಹಜಾರಗಳೂ ಇದ್ದುವು. ಮಂದಿರದ ಮುಖಭಾಗದಲ್ಲಿದ್ದ ಅಡ್ಡ ಗೋಡೆಯಲ್ಲಿ ವಿಸ್ಮಯ ಹುಟ್ಟಿಸುವಂಥ ಕಮಾನು ಬಾಗಿಲಿದೆ. ಅದರ ಪಾಶ್ರ್ವಗಳಲ್ಲಿರುವ ಸಣ್ಣ ಬಾಗಿಲುಗಳಿಂದ ಮ್ಯುಜಿನ್ (ಘೋಷಕ) ಮೀನಾರಿಗೆ ಹೋಗಬಹುದಾಗಿತ್ತು. ಹಿಂದಿನ ಗೋಡೆಯ ಒಳಮುಖವನ್ನು ಬಹಳ ಕಲಾತ್ಮಕವಾಗಿ ಶೃಂಗರಿಸಲಾಗಿದೆ. ಆದೀನ ಮಸೀದಿ ಬೃಹತ್ಪ್ರಮಾಣದಲ್ಲಿದ್ದರೂ ತನ್ನದೇ ಆದ ಭವ್ಯತೆಯನ್ನು ಹೊಂದಿದೆ. ಕಟ್ಟಡದ ಕೆಳಗಿನ ಅರ್ಧದಲ್ಲಿ ಆ ಮೊದಲ ಹಿಂದೂ ಕಟ್ಟಡಗಳಿಂದ ದೋಚಲಾದ ಬೆಸಾಲ್ಟ್ ಕಲ್ಲುಗಳನ್ನೂ ಮೇಲ್ಭಾಗದ ಕಮಾನು ಮತ್ತು ಗುಮ್ಮಟಗಳಲ್ಲಿ ಇಟ್ಟಿಗೆಯನ್ನೂ ಬಳಸಲಾಗಿದೆ. ಈ ಶೈಲಿಯ ಇತರ ಕಟ್ಟಡಗಳ ಪೈಕಿ ಗೌರ್‍ನಲ್ಲಿರುವ ಅಖಿಸೂರಜುದ್ದೀನನ ಮಸೀದಿ, ಮತ್ತು ಸಮಾಧಿ, ಊರಿನ ದಕ್ಷಿಣ ತುದಿಯಲ್ಲಿರುವ ಕೊತ್ವಾಲಿ ದರ್ವಾಜಾ ಇವನ್ನು ಹೆಸರಿಸಬಹುದು. ಆದರೆ ಆದೀನ ಮಸೀದಿಯ ಭವ್ಯತೆಯನ್ನು ಅವುಗಳಲ್ಲಿ ಕಾಣಲಾಗುವುದಿಲ್ಲ.

	ಮೂರನೆಯ ಗುಂಪಿನ ಕಟ್ಟಡಗಳು ಮುಸ್ಲಿಮ್ ವಾಸ್ತುನಿರ್ಮಾಣಗಳಲ್ಲಿ ಹೊಸದಾದ ಪ್ರಾದೇಶಿಕ ಶೈಲಿಯ ಉಗಮಕ್ಕೆ ನಿದರ್ಶನಗಳಾಗಿವೆ. ಆಗಂತುಕ ಮುಸ್ಲಿಮರು ಮೊದಲ ಎರಡು ಶತಮಾನಗಳಲ್ಲಿ ತಮ್ಮ ಕಟ್ಟಡ ಪದ್ಧತಿಯನ್ನು ಬಳಸುತ್ತಿದ್ದರು. ಆದರೆ ಕ್ರಮೇಣ ಬಂಗಾಲದ ಭೌಗೋಳಿಕ ಪರಿಸರದ ಮತ್ತು ಹೆಚ್ಚು ಮಳೆಯಿಂದ ಕೂಡಿದ ವಾಯುಗುಣದ ಪ್ರಭಾವದಿಂದ ಕಟ್ಟಡಗಳಿಗೆ ಒದಗುವ ಹಾನಿಯನ್ನು ತಿಳಿದುಕೊಂಡರು; ಅದರ ನಿವಾರಣೆಗಾಗಿ ಆ ಮೊದಲು ಹಿಂದೂ ಮಂದಿರಗಳಲ್ಲಿ ರೂಢಿಯಲ್ಲಿದ್ದ ಇಳಿಜಾರು ಚಾವಣಿ ಪದ್ಧತಿಯನ್ನು ಅನುಸರಿಸತೊಡಗಿದರು. ಅಂಥ ಕಟ್ಟಡಗಳಲ್ಲಿ ಪ್ರಾಚೀನತಮವಾದ ಸುಲ್ತಾನ್ ಜಲಾಲುದ್ದೀನನ ಏಕ್ಲಾಖಿ ಸಮಾಧಿ (1425) ಪಾಂಡುವದಲ್ಲಿದೆ. ವಿಶಿಷ್ಟ ವಾಸ್ತುಲಕ್ಷಣದಿಂದ ಕೂಡಿದ ಅದು ಆ ಶೈಲಿಯ ವಿಕಾಸದಲ್ಲಿ ಮೊದಲ ಹಂತವಾಗಿದೆ. ಆ ಶೈಲಿಯ ಇತರ ಕಟ್ಟಡಗಳಿಗೆ ಮಾದರಿಯಾಗಿಯೂ ಇದೆ. ಸುಮಾರು 23 ಮೀ. ಅಗಲದ ಪಾಶ್ರ್ವಗಳುಳ್ಳ, ಚದರ ಆಕಾರದ ಆ ಕಟ್ಟಡದ ಎತ್ತರ 7.6 ಮೀ. ಮೂರು ತಿರುವುಗಳುಳ್ಳ, ಅದರ ಸೂರು, 14 ಮೀ. ವ್ಯಾಸದ ಅರ್ಧ ವರ್ತುಲಾಕಾರದ ಗುಮ್ಮಟ ಮತ್ತು ಮೂಲೆಗಳಲ್ಲಿರುವ ಅಷ್ಟಮುಖಗಳು ಸಣ್ಣ ಗೋಪುರಗಳು ಕಟ್ಟಡದ ಮುಖ್ಯ ಅಲಂಕರಣಗಳು. ಮುಖಭಾಗದ ಗೋಡೆಯ ಮಧ್ಯಭಾಗದಲ್ಲಿ ಹಗ್ಗದಂತೆ ಪೇರಿಸಿದ ಇಟ್ಟಿಗೆಯ ವರಸೆ ಎರಡು ಅಂತಸ್ತುಗಳ ಭ್ರಮೆಯನ್ನುಂಟುಮಾಡುತ್ತದೆ. ಅದರ ನಾಲ್ಕು ದಿಕ್ಕುಗಳಲ್ಲಿ ಹಿಂದೂ ದೇವಾಲಯಗಳಿಂದ ಕಿತ್ತು ತಂದ ಕಲ್ಲಿನ ಬಾಗಿಲುವಾಡಗಳನ್ನು ಕಾಣಬಹುದು. ಬಾಗಿಲಿನ ಮೇಲೆ ಹಾಸುಗಲ್ಲಿನ ಚೂಪಾದ ಮೇಲ್ತುದಿಯುಳ್ಳ ಕಮಾನುಗಳನ್ನು ನಿರ್ಮಿಸಲಾಗಿದೆ. ಸಮಾಧಿಕೋಣೆ 14.3 ಮೀ.ಗಳ ಅಷ್ಟಕೋನಗಳುಳ್ಳದ್ದಾಗಿದೆ.

	ಅನಂತರದ 3-4 ದಶಕಗಳಲ್ಲಿ ಆಗಾಗ್ಗೆ ಹೊಸ ಅಂಶಗಳು ಸೇರಿ ಈ ಶೈಲಿ ಬೆಳೆಯಿತು. ಆ ಸುಮಾರಿಗೆ ಸೇರುವ ದಖಿಲ್ ದರ್ವಾಜಾó (1465) ಬಂಗಾಲದ ಮುಸ್ಲಿಮ್ ಶೈಲಿಯ ಒಂದು ವಿಶಿಷ್ಟ ನಿರ್ಮಾಣ. ವಿಜಯದ ಸ್ಮಾರಕವಾಗಿ ಇಟ್ಟಿಗೆಯಲ್ಲಿ ಕಟ್ಟಿದ ಆ ಕಮಾನಿನ ಹೆಬ್ಬಾಗಿಲು ಗೌರ್ ನಗರದ ಕೋಟೆಗೆ ಸೇರಿದೆ. ಈ ಬಾಗಿಲ ಇಬ್ಬದಿಗಳಲ್ಲೂ ಕಾವಲುಗಾರರ ಕೋಣೆಗಳಿವೆ. ಪ್ರತಿ ಮೂಲೆಯಲ್ಲೂ ವೃತ್ತಾಕಾರದ ಬುರುಜುಗಳಿವೆ. ಮೊನೆಯಾದ ತುದಿಯ ಮೇಲೆ ಅರ್ಧ ಗೋಲಾಕಾರದ ಚಾವಣಿಯಿತ್ತು. ಗೋಡೆಗಳ ಮೇಲಿರುವ ಸುಟ್ಟ ಮಣ್ಣಿನ ಅಲಂಕರಣಗಳು ಕಟ್ಟಡದ ಸೌಂದರ್ಯವನ್ನು ಹೆಚ್ಚಿಸಿವೆ. ದಖಿಲ್ ದರ್ವಾಜಾದ ಅನಂತರದ 75 ವರ್ಷಗಳಲ್ಲಿ ಹತ್ತಾರು ಮಸೀದಿಗಳು ಮತ್ತು ಸಮಾಧಿಗಳು ಬಂಗಾಲದ ವಿವಿಧ ಪ್ರದೇಶಗಳಲ್ಲಿ ಏಕ್ಲಾಖಿ ಸಮಾಧಿಯ ಮಾದರಿಯಲ್ಲಿ ನಿರ್ಮಿತವಾದುವು. ಕ್ರಮೇಣ ಮಸೀದಿಗಳಲ್ಲಿ ಚಾವಣಿಯಿಲ್ಲದ ಪ್ರಾಂಗಣದ ಬದಲು ಮಳೆಯಿಂದ ರಕ್ಷಣೆ ನೀಡಬಲ್ಲ ವಿಶಾಲವಾದ ಹಜಾರಗಳು ಅಸ್ತಿತ್ವಕ್ಕೆ ಬಂದವು. ಈ ಹಜಾರಗಳಿಗೆ ಮುಂಭಾಗದಲ್ಲಿ 10-12, ಮತ್ತು ಪಾಶ್ರ್ವಗಳಲ್ಲಿ 6-3 ಬಾಗಿಲುಗಳಿರುತ್ತಿದ್ದುವು. ಗೋಡೆಗಳನ್ನು ಹಲವು ಆಯಾಕಾರದ ಫಲಕಗಳನ್ನಾಗಿ ವಿಭಾಗಿಸಿ ಅವುಗಳಲ್ಲಿ ಅಲಂಕರಣ ಕೆತ್ತನೆಗಳನ್ನು ಮಾಡಲಾಗುತ್ತಿತ್ತು. ಪಶ್ಚಿಮದ ಗೋಡೆಗಳ ಮೇಲೆ ಕಮಾನುಗಳಿದ್ದ ಮುನ್ ಚಾಚಿದ ಗೂಡುಗಳಲ್ಲಿ ಮಿಹ್ರಾಬ್‍ಗಳಿದ್ದವು.,

	ಗೌರ್ ನಗರದಲ್ಲಿರುವ ತಂತಿಪಾರಾ ಮಸೀದಿ (1475) ಗಮನಾರ್ಹ ಕಟ್ಟಡ ಮುಂಭಾಗದ ಗೋಡೆಯ ಮೇಲ್ತುದಿಯಲ್ಲಿ ತಿರುವುಗಳುಳ್ಳ ಎರಡು ಕಮಾನುಗಳಿವೆ. ಗೋಡೆಗಳ ಮೇಲೆ ಸುಟ್ಟ ಮಣ್ಣಿನ ಅಲಂಕರಣಗಳಿವೆ. ಒಳಗಿನ ಹಜಾರವನ್ನು ಕಂಬಗಳಿಂದ ಎರಡು ಅಂಕಣಗಳಾಗಿ ವಿಭಾಗಿಸಲಾಗಿದೆ. ಬಗೇರ್ಹಟ್‍ನಲ್ಲಿ 1440ರಲ್ಲಿ ಕಟ್ಟಿಸಿದ ಸಾತ್‍ಗುಂಬಜ್ ಈ ಶೈಲಿಯ ಮತ್ತೊಂದು ಕಟ್ಟಡ. ಅದರ ಮುಂಭಾಗದ ಗೋಡೆಯಲ್ಲಿ 11 ಕಮಾನುಗಳಿವೆ. ಮಧ್ಯದ ಕಮಾನು ಉಳಿದವುಗಳಿಗಿಂತ ದೊಡ್ಡದು. ಮೂಲೆಗಳಲ್ಲಿರುವ ಸಣ್ಣ ಗೋಪುರಗಳು ದುಂಡಾಗಿ ಬುರುಜುಗಳಂತಿವೆ. ಗೌರ್‍ನಲ್ಲಿರುವ ಚಮ್‍ಖಾನ್ ಮಸೀದಿ (1475), ದಾರಸ್‍ಬಾರಿ ಮಸೀದಿ ಮತ್ತು ಲೋಟನ್ ಮಸೀದಿ (1480), ಗುಣ್ಮಂತ್ ಮಸೀದಿ (1484) ಛೋಟಾಸೋನಾ ಮಸೀದಿ (1510), ಬಡಾ ಸೋನಾ ಮಸೀದಿ (1526) ಮತ್ತು ಕದಮ್ ರಸೂಲ್ ಮಸೀದಿ (1530)-ಇವು ಈ ಶೈಲಿಯ ಇತರ ಕಟ್ಟಡಗಳು. ಇವುಗಳಲ್ಲಿ ಎಲ್ಲಕ್ಕಿಂತ ದೊಡ್ಡದು ಬಡಾಸೋನಾ ಮಸೀದಿ. ಇದಕ್ಕೆ ಮೂರು ದಿಕ್ಕುಗಳಲ್ಲಿ ದೊಡ್ಡ ಕಮಾನು ಬಾಗಿಲುಗಳಿವೆ. ಆಯಾಕಾರದ ಪೂಜಾಮಂದಿರವನ್ನು ಇಟ್ಟಿಗೆಯಲ್ಲಿ ಕಟ್ಟಲಾಗಿದೆ. ತುದಿಗಳಲ್ಲಿರುವ ಸಣ್ಣಗೋಪುರಗಳ ನಡುವೆ 11 ಕಮಾನುಗಳಿವೆ ಓಳಭಾಗದ ಪ್ರತಿ ಅಂಕಣದಲ್ಲೂ ಮಿಹ್ರಾಬ್‍ಗಳಿವೆ. ಮತ್ತೊಂದು ಗಮನಾರ್ಹ ನಿರ್ಮಾಣ ಫಿರೂಜ್ó ಮೀನಾರ್ (1488). ಮಸೀದಿಯೂ ಅಲ್ಲದ, ಸಮಾಧಿಯೂ ಅಲ್ಲದ ಈ ಗೋಪುರ ಕಟ್ಟಡವನ್ನು ಕುತ್ಬ್ ಮೀನಾರ್ ಮಾದರಿಯಲ್ಲಿ, ಆದರೆ ಅದಕ್ಕಿಂತ ಸಣ್ಣದಾಗಿ ಕಟ್ಟಲಾಗಿದೆ. ನಮಾಜಿಗೆ ಭಕ್ತರನ್ನು ಕರೆಯಲು ಮ್ಯುಜಿನ್ ಅದನ್ನು ಬಳಸುತ್ತಿದ್ದರೂ ಮೊದಲಿಗೆ ಅದು ವಿಜಯಸ್ತಂಭವಾಗಿತ್ತು. ಸುಮಾರು 24 ಮೀ. ಎತ್ತರದ ಮೀನಾರ್‍ನಲ್ಲಿ 5 ಅಂತಸ್ತುಗಳಿವೆ. ಕೆಳಗಿನ 3 ಅಂತಸ್ತುಗಳಿಗೆ 12 ಪಾಶ್ರ್ವಗಳಿವೆ. ಆದರೆ ಮೇಲಿನ ಎರಡು ಅಂತಸ್ತುಗಳು ವೃತ್ತಾಕಾರವಾಗಿವೆ. ಸುಟ್ಟ ಮಣ್ಣಿನ ಅಲಂಕರಣಗಳೊಂದಿಗೆ ನೀಲಿ ಮತ್ತು ಬಿಳಿ ಗಾಜಿನ ಹೆಂಚುಗಳ ಅಲಂಕಾರದಿಂದಾಗಿ ಅದರ ಆಕರ್ಷಣೆ ಹೆಚ್ಚಿದೆ.

	ಬಂಗಾಲದ ಮುಸ್ಲಿಮ್ ವಾಸ್ತುಶಿಲ್ಪ ಬಹಳ ಪರಿಣಾಮಕಾರಿಯಲ್ಲದಿದ್ದರೂ, ಆದೀನ ಮಸೀದಿ, ದಖಿಲ್ ದರ್ವಾಜಾ ಮತ್ತು ಬಡಾ ಸೋನಾ ಮಸೀದಿಗಳಂಥ ನಿರ್ಮಾಣಗಳು ಸಾಕಷ್ಟು ಆಕರ್ಷಕವೂ ಸುಂದರವೂ ಅಗಿವೆ. ಅಸ್ಸಾಮ್ ಪ್ರದೇಶದ ಮುಸ್ಲಿಮ್ ವಾಸ್ತು ನಿರ್ಮಾಣಗಳಿಗೆ ಇವು ಪ್ರೇರಕವಾದುವು.

	ನಾಣ್ಯಗಳು: ಬಂಗಾಲ ಪ್ರದೇಶದಲ್ಲಿ ಯಾವಾಗ ನಾಣ್ಯಗಳ ಬಳಕೆ ಆರಂಭವಾಯಿತೆಂದು ಹೇಳಲು ಈಗ ನಮಗೆ ದೊರಕುವ ಪುರಾವೆಗಳಿಂದ ಸಾಧ್ಯವಿಲ್ಲ. ಮಹಾಸ್ತಾನ ಶಾಸನದಲ್ಲಿ (ಕ್ರಿ,ಪೂ. 3ನೆಯ ಶತಮಾನ) ಗಂಡಕ ಮತ್ತು ಕಾಕನಿಕ ಎಂಬ ನಾಣ್ಯಗಳ ಉಲ್ಲೇಖವಿದೆ. ಗಂಡಕ ನಾಲ್ಕು ಕವಡೆಗಳ ಬೆಲೆಯುಳ್ಳ ನಾಣ್ಯ. ಕಾಕನಿಕ ಕಾರ್ಷಾಷಣದ 1/64 ಭಾಗವೆಂದು ಎಸ್.ಕೆ.ಚಟರ್ಜಿ ತಿಳಿಸುತ್ತಾರೆ. ಮೌರ್ಯ ಸಾಮ್ರಾಜ್ಯದ ಕಾಲದಲ್ಲಿ ಮುದ್ರಾಂಕಿತ ಬೆಳ್ಳಿ ನಾಣ್ಯಗಳು ಹೆಚ್ಚಾಗಿ ಬಳಕೆಯಲ್ಲಿದ್ದುವು. ಈ ನಾಣ್ಯಗಳು 2.54 ಸೆಂ.ಮೀ. ಅಳತೆಯ ತೆಳ್ಳನೆಯ ವೃತ್ತಾಕಾರದ ತುಂಡುಗಳಾಗಿವೆ. ಇವುಗಳ ಮೇಲೆ ಜ್ಯಾಮಿತಿಕ ಆಕಾರ, ಪ್ರಾಣಿ, ದಿರುಬಿಲ್ಲೆ, ಆರು ಬಾಹುಗಳ ಆಕೃತಿ, ಚೇಳು ಮುಂತಾದ ಚಿಹ್ನೆಗಳಿರುತ್ತಿದ್ದುವು. ಈ ನಾಣ್ಯ 50ರಿಂದ 54 ಗ್ರೇನ್ ತೂಕವಿರುತ್ತಿತ್ತು. ತಾಮ್ರದ ಮುದ್ರಾಂಕಿತ ನಾಣ್ಯಗಳೂ ರೂಢಿಯಲ್ಲಿದ್ದವು. ಕುಷಾಣರು ಟಂಕಿಸಿದ ತಾಮ್ರದ ಮತ್ತು ಚಿನ್ನದ ನಾಣ್ಯಗಳು ಬಂಗಾಲದ ವಿವಿಧ ಸ್ಥಳಗಳಲ್ಲಿ ಸಿಕ್ಕಿವೆ. ದಕ್ಷಿಣ ಬಂಗಾಲದಲ್ಲಿ ಕಾಲ್ಟಿಸ್ ಎಂಬ ಚಿನ್ನದ ನಾಣ್ಯ ಬಳಕೆಯಲ್ಲಿದ್ದುದಾಗಿ ಪೆರಿಪ್ಲಸ್ ಆಫ್ ದಿ ಏರಿತ್ರಿಯನ್ ಸೀ ಗ್ರಂಥದಲ್ಲಿ ತಿಳಿಸಲಾಗಿದೆ. ಅದು ಕುಷಾಣರ ಚಿನ್ನದ ನಾಣ್ಯವಾಗಿದ್ದಿರಬಹುದು. ಬಂಗಾಲದಲ್ಲಿ ಸಿಕ್ಕಿರುವ ಕುಷಾಣರ ನಾಣ್ಯಗಳು ಇತರ ಪ್ರದೇಶದವುಗಳಂತಿವೆ. ಗುಪ್ತರ ಕಾಲದಲ್ಲಿ ಮುಖ್ಯವಾಗಿ ಚಿನ್ನದ ನಾಣ್ಯಗಳು ಬಳಕೆಯಲ್ಲಿದ್ದುವು. ಇವು ಕುಷಾಣರ ಚಿನ್ನದ ನಾಣ್ಯಗಳ ಮಾದರಿಯಲ್ಲಿದ್ದರೂ ಅವಕ್ಕಿಂತ ಹೆಚ್ಚು ಕಲಾತ್ಮಕವಾಗಿದ್ದುವು. ಮತ್ತು ಇವುಗಳ ಚಿಹ್ನೆಗಳಲ್ಲಿ ಕೆಲವು ಬದಲಾವಣೆಗಳುಂಟಾದವು. ಗುಪ್ತರ 17-18 ಬಗೆಯ ನಾಣ್ಯಗಳನ್ನು ಈವರೆಗೆ ಗುರುತಿಸಲಾಗಿದೆ. ಎಲ್ಲ ದೊರೆಗಳ ಒಂದು ರೀತಿಯ ನಾಣ್ಯದ ಮೇಲೆ ದೊರೆ ಎಡಗೈಯಲ್ಲಿ ಬಿಲ್ಲು ಹಿಡಿದಿರುವುದನ್ನು ಕಾಣಬಹುದು. ಎಲ್ಲ ಬಗೆಯ ನಾಣ್ಯಗಳ ಹಿಂಭಾಗದ ಮೇಲೆ ನಿಂತ ಅಥವಾ ಕುಳಿತ ದೇವಿ ಇರುತ್ತಾಳೆ. ಕ್ಷತ್ರಪರ ನಾಣ್ಯಗಳ ಮಾದರಿಯ ಬೆಳ್ಳಿ ನಾಣ್ಯಗಳು 2ನೆಯ ಚಂದ್ರಗುಪ್ತನ ಕಾಲದಿಂದ ಇತರೆಡೆಗಳಲ್ಲಿ ಬಳಕೆಗೆ ಬಂದರೂ ಬಂಗಾಲದಲ್ಲಿ ಸ್ಕಂದಗುಪ್ತನ ಕಾಲದಿಂದ ಬೆಳ್ಳಿಯ ನಾಣ್ಯಗಳು ಬಳಕೆಗೆ ಬಂದು ಬುಧಗುಪ್ತನ ಕಾಲದವರೆಗೂ ಮುಂದುವರಿದುವು. ಗುಪ್ತರ ಕಾಲದ ತಾಮ್ರನಾಣ್ಯಗಳು ಬಹಳ ವಿರಳ. (ನೋಡಿ- ಗುಪ್ತರ-ನಾಣ್ಯಗಳು) ಗುಪ್ತರ ಶಾಸನಗಳಲ್ಲಿ ದೀನಾರ (ರೋಮನ್ ಡಿನಾರಿಯಸ್ ಆರಿಯಸ್ ಮಾದರಿ), ಬೆಳ್ಳಿಯ ರೂಪಕ ನಾಣ್ಯಗಳ ಉಲ್ಲೇಖ ಬರುತ್ತದೆ. ಕೆಲವು ಬಾರಿ ಹಿರಣ್ಯವನ್ನು ದೀನಾರ ಎಂಬ ಅರ್ಥದಲ್ಲಿ ಬಳಸಲಾಗಿದೆ. ಒಂದು ದೀನಾರ 16 ರೂಪಕಗಳಿಗೆ ಸಮವೆಂದು ಬೇಗ್ರಾಮ ತಾಮ್ರಪಟ ತಿಳಿಸುತ್ತದೆ.

	ಗುಪ್ತರ ಕಾಲದ ಅನಂತರ ಅವರ ನಾಣ್ಯಗಳಿಂದ ಪ್ರಭಾವಿತವಾದ ಚಿನ್ನದ ನಾಣ್ಯಗಳು 6ನೆಯ ಶತಮಾನದ ಉತ್ತರಾರ್ಧದಲ್ಲಿ ಬಂಗಾಲದಲ್ಲಿ ಬಳಕೆಯಲ್ಲಿದ್ದುವು. ಸಮಾಚಾರದೇವ ಮತ್ತು ಜಯಗುಪ್ತ ಇವರು ಗುಪ್ತರ `ಬಿಲ್ಲುಗಾರ ಮಾದರಿಯ ಚಿನ್ನದ ನಾಣ್ಯಗಳನ್ನು ಬಂಗಾಲದಲ್ಲಿ ಮೊದಲಿಗೆ ಅಚ್ಚು ಹಾಕಿಸಿದರು. ಇವುಗಳ ಹಿಂಬದಿಯಲ್ಲಿ ಲಕ್ಷ್ಮಿ, ಅಥವಾ ಗಜಲಕ್ಷ್ಮಿ ಚಿಹ್ನೆಗಳಿವೆ. ಸಮಾಚಾರದೇವನ ರಾಜಲೀಲಾ ಮುದ್ರೆಯ ನಾಣ್ಯಗಳ ಹಿಂಬದಿಯಲ್ಲಿ ಸರಸ್ವತಿ ಇದೆ. 6-7ನೆಯ ಶತಮಾನಗಳಲ್ಲಿ ಇವಲ್ಲದೆ ಜಯನಾಗ, ಪೈಥುವೀರ ಮತ್ತು ಸುಧನ್ಯಾದಿತ್ಯರ ನಾಣ್ಯಗಳ ಉಲ್ಲೇಖ ಶಾಸನಗಳಲ್ಲಿದೆ. ಇವೆಲ್ಲವನ್ನು ಗುಪ್ತರ ನಾಣ್ಯಗಳ ಮಾದರಿಯಲ್ಲಿ ಅಚ್ಚುಹಾಕಿಸಲಾಗಿತ್ತು. 7ನೆಯ ಶತಮಾನದ ಆದಿಭಾಗದಲ್ಲಿ ಶಶಾಂಕನ ಮಿಶ್ರಸುವರ್ಣ ನಾಣ್ಯಗಳು ಬಳಕೆಯಲ್ಲಿದ್ದುವು. ಅವುಗಳ ಮೇಲೆ ನಂದಿಯ ಮೇಲೆ ಒರಗಿ ನಿಂತ ಶಿವ ಮುಂಭಾಗದಲ್ಲೂ ಕುಳಿತ ಗಜಲಕ್ಷ್ಮಿ ಹಿಂಬದಿಯಲ್ಲೂ ಇರುತ್ತಿದ್ದುವು. ಅದೇ ಕಾಲದ ವೀರಸೇನನ ನಾಣ್ಯಗಳ ಮೇಲೆ ಮುಂಬದಿಯಲ್ಲಿ ನಂದಿ, ಹಿಂಬದಿಯಲ್ಲಿ 7-8ನೆಯ ಶತಮಾನಗಳಲ್ಲಿ ಹೆಚ್ಚಾಗಿ ಬೆರಕೆ ಚಿನ್ನದ ಅನೇಕ ನಾಣ್ಯಗಳು ಬಳಕೆಯಲ್ಲಿದ್ದುವು. ಅವುಗಳಲ್ಲಿ ಧನುರ್ಬಾಣಗಳನ್ನು ಹಿಡಿದು ನಿಂತ ಅರಸನ ಚಿತ್ರ ಮುಂಬದಿಯಲ್ಲೂ ನಿಂತ ದೇವಿ ಹಿಂಬದಿಯಲ್ಲೂ ಕೆಲವು ಅಸ್ಪಷ್ಟ ಶಾಸನಗಳು ಎರಡು ಬದಿಗಳಲ್ಲೂ ಇರುತ್ತಿದ್ದವು. 8ನೆಯ ಶತಮಾನದ ಮತ್ತೊಂದು ನಾಣ್ಯ ಉತ್ತಮವಾಗಿದೆ. ಅದರ ಮುಂಭಾಗದ ಮೇಲೆ ಅವಲೋಕಿತೇಶ್ವರನ ಚಿತ್ರದ ಬದಿಯಲ್ಲಿ ಅಂಚಲಿ ಹಸ್ತ ಅರಸ ಮತ್ತು ಹಿಂಬದಿಯಲ್ಲಿ ಆನೆ ಧ್ವಜವೂ ಶ್ರೀವಿಂಧ್ಯಶಕ್ತಿ ಎಂಬ ಶಾಸನವೂ ಇವೆ. 9ನೆಯ ಶತಮಾನದ ದೇವಪಾಲನ ನಾಣ್ಯದ ಮೇಲೆ ಧನುರ್ಬಾಣಧಾರಿ ದೊರೆಯ ಮತ್ತು ಹಿಂಬದಿಯಲ್ಲಿ ಲಕ್ಷ್ಮಿಯ ಚಿತ್ರಗಳಿವೆ. ಪಾಲರ ಶಾಸನಗಳಲ್ಲಿ ದ್ರಮ್ಮ ನಾಣ್ಯದ ಉಲ್ಲೇಖವಿದೆ. ಶ್ರೀವಿಗ್ರ ಅಥವಾ ವಿಗ್ರ ಎಂಬ ಶಾಸನವುಳ್ಳ, ತಾಮ್ರ ಮತ್ತು ಬೆಳ್ಳಿಯ ನಾಣ್ಯಗಳನ್ನು ವಿಗ್ರಹಪಾಲನ ನಾಣ್ಯಗಳೆಂದು ಗುರುತಿಸಲಾಗಿದೆ. ಧರ್ಮಪಾಲನ ಮತ್ತು ದೇವಪಾಲನ ನಾಲಂದ ಶಾಸನಗಳಲ್ಲಿ ಹಿರಣ್ಯದ ಉಲ್ಲೇಖವಿದ್ದರೂ ಅದು ನಾಣ್ಯಗಳ ಬೆಲೆಯನ್ನು ಸೂಚಿಸುತ್ತದೆಯೇ ವಿನಾ ನಾಣ್ಯವಲ್ಲವೆಂದು ಅಭಿಪ್ರಾಯಪಡಲಾಗಿದೆ. ಚಂದ್ರ ಮತ್ತು ವರ್ಮನ್ ಮನೆತನಗಳ ಶಾಸನಗಳಲ್ಲೂ ಹಿರಣ್ಯದ ಉಲ್ಲೇಖವಿದೆ. ಆದರೆ ಸೇನರ ಶಾಸನಗಳಲ್ಲಿ ಪುರಾಣ ಅಥವಾ ಕಪರ್ದಕ ಪುರಣಾಗಳ ಉಲ್ಲೇಖ ಸಾಮಾನ್ಯ. ನೌಕಾಯಾನದ ತೆರವನ್ನು ಕೊಡಲು ಕಪರ್ದಕವನ್ನು ಬಳಸುತ್ತಿದ್ದುದಾಗಿ ತಿಳಿದುಬರುತ್ತದೆ. ಅದರ ಬೆಲೆ ಕವಡೆಯ ಬೆಲೆಗೆ ಸಮವೆಂದು ಹೇಳಲಾಗಿದೆ. ಪುರಾಣ ಮತ್ತು ಕಪರ್ದಕ ಪುರಾಣಗಳು ಬೆಳ್ಳಿಯ ನಾಣ್ಯಗಳೆಂದು ಭಂಡಾರ್ಕರ್ ಭಾವಿಸಿದ್ದಾರೆ. ಆದರೆ ಅಂಥ ನಾಣ್ಯಗಳಿರಲಿಲ್ಲವೆಂದೂ ಮೌಲ್ಯನಿರ್ಧಾರಕ್ಕೆ ಕವಡೆಗಳ ಬೆಲೆಯಲ್ಲಿ ಲೆಕ್ಕ ಮಾಡಲು ಅವು ಮಾನಗಳಾಗಿದ್ದುವೆಂದೂ ಎಸ್.ಕೆ.ಚಟರ್ಜಿ ಅಭಿಪ್ರಾಯಪಟ್ಟಿದ್ದಾರೆ.

	ಮುಸ್ಲಿಮ್ ಅಡಳಿತದ ಕಾಲದಲ್ಲಿ ಅವರ ರಾಜ್ಯಾದ್ಯಂತ (ಬಂಗಾಲವೂ ಸೇರಿದಂತೆ ಉತ್ತರ ಭಾರತದ ಹೆಚ್ಚು ಭಾಗ) ಏಕರೂಪದ ನಾಣ್ಯಪದ್ಧತಿಯನ್ನು ಜಾರಿಗೆ ತರಲಾಯಿತು. ಅದರೆ ಕೆಲವು ಬಾರಿ ದೆಹಲಿಯ ಸುಲ್ತಾನರು ಬಂಗಾಲದ ಟಂಕಸಾಲೆಗಳಲ್ಲಿ ನಾಣ್ಯಗಳನ್ನು ಮುದ್ರಿಸುತ್ತಿದ್ದರು. ಅಥವಾ ಬಂಗಾಲ ಪ್ರಾಂತಕ್ಕಾಗಿ ವಿಶಿಷ್ಟವಾದ ನಾಣ್ಯಗಳನ್ನು ತಯಾರಿಸುತ್ತಿದ್ದರು. ಮಧ್ಯಯುಗದಲ್ಲಿ ಅನೇಕ ಬಾರಿ ಬಂಗಾಲ ಸ್ವತಂತ್ರ ಅಥವಾ ಸ್ವಾಧಿಕಾರದ ಪ್ರದೇಶವಾಗಿದ್ದಾಗ ಅದರದೇ ಆದ ನಾಣ್ಯ ಪದ್ಧತಿ ಇದ್ದುದುಂಟು. ಅಂಥ ನಾಣ್ಯ ಪದ್ಧತಿಯ ಸ್ಥೂಲ ಸಮೀಕ್ಷೆಯನ್ನು ಮುಂದೆ ಕೊಡಲಾಗಿದೆ.

	ಗುಲಾಮೀ ಸಂತತಿಯ ರಜಿಯಾ ಬೇಗಮಳ ಕಾಲದಲ್ಲಿ ಲಖ್ನೌತಿ (ಈಗಿನ ಗೌರ್) ಪ್ರಾಂತ್ಯಾಧಿಕಾರಿಯ ಮುಖ್ಯಸ್ಥಳವಾಗಿದ್ದು ನಾಣ್ಯಗಳ ಮೇಲೆ ಅದರ ಹೆಸರನ್ನು ಟಂಕಿಸಲಾಗಿತ್ತು. ಮತ್ತೆ ತುಗಲಖ್ ಮಹಮ್ಮದನ ಕಾಲದಲ್ಲಿದ್ದ ಅನೇಕ ಟಂಕಸಾಲೆಗಳಲ್ಲಿ ಲಖ್ನೌತಿ ಒಂದಾಗಿತ್ತು. ಅಲ್ಲಿಂದ ಚಿನ್ನ, ಬೆಳ್ಳಿ, ಬೆರಕಬೆಳ್ಳಿ, ಮತ್ತು ಕೊನೆಗೆ (1329-30ರ ಅನಂತರ) ತಾಮ್ರ ನಾಣ್ಯಗಳನ್ನು ಅಚ್ಚು ಹಾಕಿಸಿದುದಾಗಿ ತಿಳಿದುಬರುತ್ತದೆ. ಅವನ ನಾಣ್ಯಗಳ ಮೇಲಿನ ಬರಹ ಅಂದವಾಗಿತ್ತು. ಮೊದಲು ಅವನು ತಂದೆಯ ಹೆಸರಿನಲ್ಲಿ ಅಲ್‍ಶಹೀದ್ ಫಿಯಾಸುದ್ದೀನ್ ತುಗಲಖ್ ಎಂಬ ಬರಹವಿದ್ದ ನಾಣ್ಯವನ್ನು ಹೊರಡಿಸಿದ. ತರುವಾಯ ಕಲಿಮಾ ನಾಣ್ಯವನ್ನು ಹೊರಡಿಸಿದ, ಸ್ವಲ್ಪ ಕಾಲದ ಅನಂತರ 170 ಗುಂಜಿ ತೂಕದ ಚಿನ್ನದ ನಾಣ್ಯಕ್ಕೆ ಬದಲಾಗಿ 201.5 ಗುಂಜಿ ತೂಕದ ನಾಣ್ಯವನ್ನು ಅಚ್ಚುಹಾಕಿಸಲಾಯಿತು. ಬೆಳ್ಳಿಯ ನಾಣ್ಯದ ತೂಕ 144 ಗುಂಜಿಗಳಷ್ಟಿರುತ್ತಿತ್ತು. 1327ರ ಅನಂತರ ಬೆರಕೆ ಬೆಳ್ಳಿಯ ಟಂಕ ರೂಢಿಗೆ ಬಂತು. ಷೇರ್‍ಷಾ ಬಂಗಾಲದ ಪಾಂಡುವದಲ್ಲಿ ಟಂಕಸಾಲೆಯನ್ನು ಸ್ಥಾಪಿಸಿದ್ದ. 1540ರಲ್ಲಿ ಮೊಗಲ್ ಸಿಂಹಾಸನವನ್ನು ವಶಪಡಿಸಿಕೊಳ್ಳುವ ಮೊದಲು ಬಂಗಾಲದಿಂದ ಬೆಳ್ಳಿ ಮತ್ತು ತಾಮ್ರ ನಾಣ್ಯಗಳನ್ನು ಹೊರಡಿಸಿದ್ದ. ಆಮೇಲೆ ಬೆರಕ ಬೆಳ್ಳಿ ನಾಣ್ಯಗಳನ್ನು ನಿಲ್ಲಿಸಿದ. ಅವನ ನಾಣ್ಯಗಳ ಮೇಲೆ ಕಲಿಮಾದ ಮತ್ತು ಕಲೀಫರ ಹೆಸರುಗಳಿರುತ್ತಿದ್ದವು. ಹಿಂಬದಿಯಲ್ಲಿ ಅವನ ಹೆಸರು, ಟಂಕಸಾಲೆಯ ಹೆಸರು, ನಾಣ್ಯ ಹೊರಟ ವರ್ಷ ಇವನ್ನು ಮುದ್ರಿಸಲಾಗಿರುತ್ತಿತ್ತು. ಅವನ ವಂಶದವರ ಬೆಳ್ಳಿ ನಾಣ್ಯಗಳು 180 ಗುಂಜಿ ತೂಕದವಾಗಿದ್ದುವು. ಅವಕ್ಕೆ ರುಪಿಯೂ ಎಂಬ ಹೆಸರಿತ್ತು. ಅವು ಭಾರತದ ಮೊದಲ ರೂಪಾಯಿಗಳು. ಅವರ ತಾಮ್ರ ನಾಣ್ಯಗಳ ಹೆಸರು ಪೈಸಾ. ಇವು ಭಾರತದ ಮೊದಲ ಪೈಸಾಗಳು.

	ಬಂಗಾಲ 1202ರಲ್ಲಿ ಮುಸ್ಲಿಮರ ವಶವಾದಾಗಿನಿಂದ 1328ರ ವರೆಗೆ ದೆಹಲಿಯ ಸುಲ್ತಾನರ ಆಳ್ವಿಕೆಗೆ ಸೇರಿದ್ದರೂ ಅಲ್ಲಿಯ ಪ್ರಾಂತ್ಯಾಧಿಕಾರಿಗಳು ಹೆಚ್ಚು ಕಡಿಮೆ ಸ್ವತಂತ್ರವಾಗಿದ್ದರು. ಆಗಾಗ ದಂಗೆಗಳಾಗುತ್ತಿದ್ದುವು. ಆ ಸಮಯದಲ್ಲಿ 25 ಪ್ರಾಂತ್ಯಾಧಿಕಾರಿಗಳಿದರ್ದೂ ಅವರಲ್ಲಿ ಆರು ಮಂದಿ, ಎಂದರೆ ಘಿಯಾಸುದ್ದೀನ್ ಇವಾಜ್ (1211-26), ಮುಫಿಸುದ್ದೀನ್ ಯುಜ್‍ಬಾಕ್ (1245-58), ರುಕ್ನುದ್ದೀನ್ ಕಾಯಿಕುಸ್ (1291-1302), ಷಂಷುದ್ದೀನ್ ಫಿರೋಜ್ ಷಾ (1302-18), ಷಿಹಾಬುದ್ದೀನ್ ಬುಫ್ರಾ ಷಾ (1318) ಮತ್ತು ಘಿಯಾಸುದ್ದೀನ್ ಬಹದ್ದೂರ್ ಷಾ (1310-23) ಇವರು ಮಾತ್ರ ತಮ್ಮದೇ ನಾಣ್ಯಗಳನ್ನು ಅಚ್ಚು ಹಾಕಿಸಿದ್ದರು. ಇವು ಬೆಳ್ಳಿಯ ನಾಣ್ಯಗಳು, ಷಂಷದ್ದೀನ್ ಫಿರೋಜ್ ಷಾನ ಕೆಲವು ಚಿನ್ನದ ನಾಣ್ಯಗಳೂ ಸಿಕ್ಕಿವೆ. ಮೊದಲ ಇಬ್ಬರ ನಾಣ್ಯಗಳ ಮೇಲೆ ಮುಂಬದಿಯಲ್ಲಿ ಕಲಿಮಾ ಮತ್ತು ವರ್ಷವೂ ಹಿಂಬದಿಯಲ್ಲಿ ಅರಸನ ಹೆಸರು ಮತ್ತು ಬಿರುದುಗಳೂ ಇರುತ್ತಿದ್ದುವು. ಕಡೆಯ ನಾಲ್ವರ ನಾಣ್ಯಗಳ ಮೇಲೆ ಕಲಿಮಾದ ಬದಲು ಬಾಗ್ದಾದಿನ ಖಲೀಫನ ಹೆಸರು-ಆಲ್ ಮುಸ್ಟಸಿಮ್-ಇರುತ್ತಿತ್ತು.

	ಇಲ್ಯಾಸ್‍ಷಾಹಿ ಮನೆತನ 1339ರಲ್ಲಿ ಅಧಿಕಾರಕ್ಕೆ ಬಂದ ಮೇಲೆ, 1556ರಲ್ಲಿ ಬಂಗಾಲ ಅಕ್ಬರನ ವಶವಾಗುವವರೆಗೆ, ಇಲ್ಲಿ ಆರು ಮನೆತನಗಳು ಸ್ವತಂತ್ರವಾಗಿ ಅಧಿಕಾರ ನಡೆಸಿದವು. ಅವರೆಲ್ಲರ ನಾಣ್ಯಗಳು ದೆಹಲಿ ಸುಲ್ತಾನರ ನಾಣ್ಯಗಳ ರೀತಿಯವಾಗಿದ್ದರೂ ಅವುಗಳ ಅಂಚುಗಳಲ್ಲಿದ್ದ ಚಿಹ್ನೆಗಳು ಪ್ರತ್ಯೇಕವಾಗಿರುತ್ತಿದ್ದವು. ಮುಂಬದಿಯಲ್ಲಿ ಖಲೀಫನಿಗೆ ಮತ್ತು ಇಸ್ಲಾಮ್ ಧರ್ಮಕ್ಕೆ ಸಂಬಂಧಿಸಿದ ಬರಹಗಳಿರುತ್ತಿದ್ದವು. ಜಲಾಲುದ್ದೀನನ (1414-1431) ನಾಣ್ಯಗಳ ಮೇಲೆ ಕಲಿಮಾದ ಲಿಖಿತ, ಅದರ ಕೆಳಗೆ ಟಂಕಸಾಲೆಯ ಅಂಕಿತ ಮತ್ತು ವರ್ಷ ಇರುತ್ತಿದ್ದುವು. ಹುಸೇನ್ ಷಾ ಮತ್ತು ಅವನ ಉತ್ತರಾಧಿಕಾರಿಗಳು ನಾಣ್ಯಗಳ ಮೇಲೆ ತಮ್ಮ ಬಿರುದುಗಳನ್ನು ಎರಡು ಬದಿಯಲ್ಲೂ ಬರೆಸುತ್ತಿದ್ದರು. ಆ ನವಾಬರ ಕಾಲದಲ್ಲಿ 21 ಟಂಕಸಾಲೆಗಳಿದ್ದುದಾಗಿ ತಿಳಿದುಬಂದಿದೆ. ಆದರೆ ಅವುಗಳಲ್ಲಿ ಹಲವು ಒಂದೇ ಸ್ಥಳದಲ್ಲಿ, ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಇದ್ದ ಟಂಕಸಾಲೆಗಳೆಂದು ಶಂಕಿಸಲಾಗಿದೆ. ಆ ನಾಣ್ಯಗಳ ಮೆಲೆ ಸಾಮಾನ್ಯವಾಗಿ ಅರಬ್ಬೀ ಶಾಸನಗಳಿರುತ್ತಿದ್ದವು. ಆದರೆ ರಾಜಾ ಗಣೇಶ ಮತ್ತು ಇತರ ಹಿಂದೂ ದೊರೆಗಳ ನಾಣ್ಯಗಳ ಮೇಲೆ ಬಂಗಾಲಿ ಭಾಷೆಯ ಶಾಸನಗಳೂ ಶಕವರ್ಷವೂ ಇದ್ದುವು. ಬಂಗಾಲದ ಮೊದಲ ನಾಣ್ಯಗಳು 170 ಗುಂಜಿ ತೂಕದವಾಗಿದ್ದವು. ಅನಂತರದ ಕಾಲದಲ್ಲಿ 166 ಗುಂಜಿ ತೂಕದವಾಗಿದ್ದುವು. ಕಲೆಯ ದೃಷ್ಟಿಯಿಂದ ಅವು ಕೆಳಮಟ್ಟದವು.

	ಮೊಗಲ್ ದೊರೆಗಳ ಕಾಲದಲ್ಲಿ ಅವರ ನಾಣ್ಯಗಳೇ ಅಲ್ಲಿ ಬಳಕೆಯಲ್ಲಿದ್ದುವು. ಆದರೆ ಷಹಜಹಾನನ ಮಗ, ಷಾ ಷೂeóÁ ಇಲ್ಲಿಯ ಪ್ರಾಂತ್ಯಾಧಿಕಾರಿಯಾಗಿದ್ದಾಗ (1656-57) ಇಲ್ಲಿಯ ಅಕ್ಬರ್ ನಗರದಿಂದ ನಾಣ್ಯಗಳನ್ನು ಹೊರಡಿಸಿದ. ಅವು ಚೌಕಾಕಾರವಾಗಿದ್ದುವು. ಒಂದು ಕಡೆ ಕಲಿಮಾ ಮತ್ತು ಖಲೀಫನ ಹೆಸರು ಮತ್ತೊಂದು ಕಡೆ ಷೂeóÁನ ಹೆಸರು ಮತ್ತು ಬಿರುದುಗಳು ಇದ್ದುವು.

	ಭಾರತಕ್ಕೆ ಯೂರೋಪಿಯನ್ನರು ಬಂದ ಮೇಲೆ ಅವರ ನಾಣ್ಯಗಳು ಬಳಕೆಗೆ ಬಂದುವು. ಅವರಲ್ಲಿ ಮೊದಲಿಗರಾದ ಪೋರ್ಚುಗೀಸರು ಬಂಗಾಲದ ಹೂಗ್ಲಿಯಲ್ಲಿ ತಮ್ಮ ವ್ಯಾಪಾರ ಕೋಠಿಯನ್ನು ಸ್ಥಾಪಿಸಿದ್ದರು. ಅವರು ಗೋವೆಯ ಟಂಕಸಾಲೆಯಿಂದ ಹೊರಡಿಸಿದ ಚಿನ್ನದ ಮೆನೊಯಲ್ (ಪಗೋಡಕ್ಕೆ ಸಮ) ಮತ್ತು ಬೆಳ್ಳಿಯ ಎಸ್ಟರ್ ಅಥವಾ ಬಸ್ತಿಯದ್ ಅಥವಾ ಸೆರಾಫಿಮ್ ಮತ್ತು ಟಂಗ ನಾಣ್ಯಗಳು ಇಲ್ಲೂ ಬಳಕೆಯಲ್ಲಿದ್ದುವು. 1611ರ ತರುವಾಯ ಅವರು ತಾಮ್ರದ ಬುeóÁರುಕ್ಕೊಸ್ ನಾಣ್ಯಗಳನ್ನು ಮುದ್ರಿಸಿದರು. ಡಚ್ಚರು 1664 ಹೂಗ್ಲಿ, ಕಾಸಿಮ್, ಬeóÁರ್ ಮತ್ತು ಢಾಕಾಗಳಲ್ಲಿ ತಮ್ಮ ವ್ಯಾಪಾರ ಠಾಣ್ಯಗಳನ್ನು ಸ್ಥಾಪಿಸಿದರು, 1759ರಲ್ಲಿ ಬಂಗಾಲದ ಡಚ್ ವಸಾಹತುಗಳು ಇಂಗ್ಲಿಷರ ವಶವಾದುವು. ಡಚ್ಚರು ತಮ್ಮ ಮಾತೃಭೂಮಿಯಲ್ಲಿ ಚಲಾವಣೆಯಲ್ಲಿದ್ದ ಡುಕಾ ಟೂನ್ಸ್ ಬೆಳ್ಳಿ ನಾಣ್ಯಗಳನ್ನು ಬಂಗಾಲದಲ್ಲಿ ಬಳಸುತ್ತಿದ್ದರು. ಅವುಗಳ ಮುಂಬದಿಯಲ್ಲಿ ಖಡ್ಗಧಾರಿ ಕುದುರೆ ಸವಾರನ ಚಿತ್ರವೂ ಹಿಂಬದಿಯಲ್ಲಿ ಕೆಲವು ಬರಹಗಳು, ಎರಡು ಸಿಂಹಗಳ ಮೇಲೆ ಇಟ್ಟ ರಾಜಚಿಹ್ನೆ ಮತ್ತು ಕಂಪನಿಯ ಅಂಕಿತ ಇವೂ ಇದ್ದುವು. ಅಲ್ಲದೆ ಬೇರೆ ದೇಶದ ನಾಣ್ಯಗಳ ಮೇಲೆ ತಮ್ಮ ಕಂಪನಿಯ ಅಂಕಿತವನ್ನು ಮುದ್ರಿಸಿ ಅವನ್ನೂ ಬಳಸುತ್ತಿದ್ದರು. ಡೇನರು 17ನೆಯ ಶತಮಾನದ ಮಧ್ಯಕಾಲದಲ್ಲಿ ಬಂಗಾಲದ ಶ್ರೀರಾಮಪುರದಲ್ಲಿ ತಮ್ಮ ವ್ಯಾಪಾರ ಕೋಠಿಯನ್ನು ಸ್ಥಾಪಿಸಿದರು. ತವರ ಮತ್ತು ತಾಮ್ರದ 10,2 ಮತ್ತು 1 ಕಾಸುಗಳನ್ನು ಬೆಳ್ಳಿಯ ಪಣಮ್‍ಗಳನ್ನು ಮತ್ತು ಸ್ವಲ್ಪಕಾಲ ಚಿನ್ನದ ಪಗೋಡಗಳನ್ನು ಚಲಾವಣೆಗೆ ತಂದಿದ್ದರು. ತಮ್ಮ ದೇಶದ ಚಿನ್ನದ ನಾಣ್ಯವಾದ ಡುಕಾಟ್ಸ್ ಅನ್ನೂ ಅವರು ಬಳಸುತ್ತಿದ್ದರು. ಫ್ರೆಂಚರು 1690ರಲ್ಲಿ ಚಂದ್ರನಾಗೋರಿನಲ್ಲಿ ತಮ್ಮ ಕೋಠಿಯನ್ನು ಸ್ಥಾಪಿಸಿದರು. 1738 ಚಂದ್ರನಾಗೋರಿನಿಂದ ನಾಣ್ಯಗಳನ್ನು ಹೊರಡಿಸಿದರೆಂದು ಹೇಳಲಾಗಿದ್ದರೂ ಅವು ಈವರೆಗೆ ದೊರಕಿಲ್ಲ. ಇತರ ಪ್ರದೇಶಗಳಲ್ಲಿ ಬಳಸುತ್ತಿದ್ದ ನಾಣ್ಯಗಳನ್ನು ಅವರು ಬಂಗಾಲದಲ್ಲೂ ಬಳಸುತ್ತಿದ್ದಿರಬೇಕು.

	ಇಂಗ್ಲಿಷರು 1651ರಲ್ಲಿ ಹೂಗ್ಲಿಯಲ್ಲೂ ಸ್ವಲ್ಪಕಾಲಾನಂತರ ಕಾಸಿಮ್ ಬಜಾರದಲ್ಲೂ ತಮ್ಮ ವ್ಯಾಪಾರ ಕೋಠಿಗಳನ್ನು ಸ್ಥಾಪಿಸಿದರು. ಈಸ್ಟ್ ಇಂಡಿಯ ಕಂಪನಿ 1759ರ ವರೆಗೆ ಬಂಗಾಲದಲ್ಲಿ ನಾಣ್ಯಗಳನ್ನು ಅಚ್ಚುಹಾಕಿಸಲಿಲ್ಲ. ಕಂಪನಿಯವರು ಸ್ಥಳೀಯ ನಾಣ್ಯಗಳನ್ನು ಉಪಯೋಗಿಸುತ್ತಿದ್ದರು. 1764ರಲ್ಲಿ ಬಂಗಾಲದ ದಿವಾನಿ ಹಕ್ಕನ್ನು ಪಡೆದುಕೊಂಡು ಮೇಲೆ ಅವರು ಸ್ವಂತ ನಾಣ್ಯಗಳನ್ನು ಹೊರಡಿಸಲಾರಂಭಿಸಿದರು. ಕಲ್ಕತ್ತದಲ್ಲಿ ಮುರ್ಷಿದಾಬಾದ್ ಟಂಕಸಾಲೆಯನ್ನು ಸ್ಥಾಪಿಸಿದರು. 1835ರಲ್ಲಿ ಅವರು ಭಾರತಕ್ಕೆ ಏಕರೂಪದ ನಾಣ್ಯಪದ್ಧತಿಯನ್ನು ಜಾರಿಗೆ ತಂದಾಗ ಚಕ್ರವರ್ತಿಯ ತಲೆಯ ಚಿತ್ರವಿರುವ ನಾಣ್ಯಗಳು ಚಲಾವಣೆಗೆ ಬಂದುವು. 1947ರಲ್ಲಿ ಅವರು ಭಾರತದಿಂದ ಹೋಗುವವರೆಗೂ ಅವರು ಅವನ್ನು ಹೊರಡಿಸುತ್ತಿದ್ದರು. ಬಂಗಾಲದಲ್ಲಿ ಅವರು ಮೊದಲು ತಮ್ಮ ಮದರಾಸ್ ಟಂಕಸಾಲೆಯ ನಾಣ್ಯಗಳನ್ನು ಬಳಸುತ್ತಿದ್ದರು. 1756ರಲ್ಲಿ ಕಲ್ಕತ್ತದ ಅಲಿನಗರ ಟಂಕಸಾಲೆಯನ್ನು ಸ್ಥಾಪಿಸಿ ಮೊಗಲ್ ಚಕ್ರವರ್ತಿಯ ಹೆಸರಿನ ರೂಪಾಯಿ ನಾಣ್ಯಗಳನ್ನು ಮುದ್ರಿಸಲಾರಂಭಿಸಿದರು. 1763ರಲ್ಲಿ ಮೊಗಲ್ ಚಕ್ರವರ್ತಿಯ ಹೆಸರನ್ನು ತ್ಯಜಿಸಿದರು, 1777ರಿಂದ ದೇಶಾದ್ಯಂತ ರೂಪಾಯಿ ಬಳಕೆಗೆ ಬಂತು.
(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ